“ಹಾಲಿನ ಮುನಿಯಮ್ಮ ಶಿವರಸನ್‌ ಗ್ಯಾಂಗ್‌ ಬಗ್ಗೆ ಪೊಲೀಸರಿಗೆ ತಿಳಿಸಿದ ಗುಟ್ಟು”

ನಿವೃತ್ತ ಪೋಲಿಸ್‌ ಅಧಿಕಾರಿ ಬಿ.ಕೆ ಶಿವರಾಂ ಅವರ ಪೋಲಿಸ್‌ ಅನುಭವಗಳು ಭಾಗ 15


ಆ ಮನೆಯಲ್ಲಿ ಯಾರೂ ದೀಪವನ್ನೇ ಹಾಕಿರಲಿಲ್ಲ. ಮೇಣದ ಬೆಳಕಿನಲ್ಲಿ ಇದ್ರು. ಮನೆಯ ಬಾಲ್ಕನಿಯಲ್ಲಿ ಮಾತ್ರ ಕೆಂಪು ಲೈಟ್‌ ಇತ್ತು. ನಮಗೆ ಬಹಳ ಆಶ್ಚರ್ಯವಾಯಿತು. ಈ ಮನೆ ಎಂದು ಗೊತ್ತಾಗುವುದಕ್ಕೆ ಈ ಲೈಟ್‌ ಹಾಕಿದ್ದಾರೆ ಎಂದು ನಮ್ಮಲ್ಲೇ ಚರ್ಚೆ ನಡೆಯಿತು. ನಾವು ಆ ಮನೆಯಿಂದ 100–200 ಅಡಿ ದೂರದಲ್ಲಿದ್ದೆವು. ಕಿಟಕಿಯಲ್ಲಿ ಅವರ ಚಲನವಲನ ಕಾಣಿಸುತ್ತಿತ್ತು. ಇದಕ್ಕಿದ್ದಂತೆ ಮೇಲೆ ಹೋಗಿ, ತಿರುಗಿ ಓಡಿ ಬರೋದು ಎಲ್ಲ ಕಾಣುತ್ತಿತ್ತು. ಇಲ್ಲಿ ಐದಾರು ಜನ ಇದ್ದಾರೆ ಎಂದು ನಮಗೆ ಖಾತ್ರಿ ಆಯ್ತು.


ಈ ಮಾಹಿತಿಯನ್ನು ಡಿಸಿಪಿಗೆ ಕೊಟ್ವಿ. ಬಹಳ ಎಚ್ಚರಿಕೆಯಿಂದ ಇರ್ರಿ. ಅವರು ಅಲ್ಲೇ ಇದ್ದಾರೆ ಎಂಬುದು ಖಾತ್ರಿ ಆಗಿದೆ. ಸಿಬಿಐ ಅವರೆಲ್ಲ ಬರುತ್ತಿದ್ದಾರೆ ಅಂದ್ರು. ಇಲ್ಲ ಸರ್‌, ನಾವು ನುಗ್ಗಿ ಬಿಡುತ್ತೇವೆ ಅಂದ್ವಿ. ನುಗ್ಗಲು ಆಗಲ್ಲ ಹಾಗೆ ಅಂದ್ರು. ಅಷ್ಟೊತ್ತಿಗೆ ಆ ಮನೆಗೆ ಮುನಿಯಮ್ಮ ಎಂಬ ಹೆಂಗಸು ಹಾಲು ಕೊಡುತ್ತಿದ್ದಳು. ಅವಳನ್ನು ವಿಚಾರಿಸಿದ್ವಿ. ನಾಲ್ಕೈದು ಜನ ಇದ್ದಾರೆ. ಎಷ್ಟು ಜನ ಇದ್ದಾರೆ ಎಂಬುದು ನನಗೂ ಖಾತ್ರಿ ಇಲ್ಲ. ನಾನು ಹೋಗಿ ಹಾಲಮ್ಮ ಅಂದ್ರೆ ಪಾತ್ರೆ ಹೊರಗೆ ಇಡುತ್ತಾರೆ. ಪಾತ್ರೆಗೆ ಹಾಲು ಹಾಕಿದ ಕೂಡಲೇ, ಅದನ್ನು ಒಳಗೆ ತೆಗೆದುಕೊಂಡು ಬಾಗಿಲು ಹಾಕಿಬಿಡುತ್ತಾರೆ ಅಂದ್ಲು. ಆ ಹೆಂಗಸಿನ ಸಹಾಯದಿಂದ ಆ ಮನೆಯ ಒಳಗೆ ನುಗ್ಗುವುದು ಎಂದು ಪ್ಲಾನ್‌ ಮಾಡಿದ್ವಿ. ಅವರು ತಕ್ಷಣವೇ ಹಾಲನ್ನು ಒಳಗೆ ಎಳೆದುಕೊಂಡು ಬಿಡುತ್ತಿದ್ರು. ಹಾಗೆ ಮಾಡಲು ಆಗೊಲ್ಲ. ಮತ್ತೆ ಆ ಹೆಂಗಸಿಗೆ ಗುಂಡು ಬಿದ್ರೆ ಸರಿ ಆಗೊಲ್ಲ ಎಂದು ಆ ನಿರ್ಧಾರವನ್ನು ಕೈಬಿಟ್ವಿ. ಮುಂದೆ ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗಲೇ ರಾತ್ರಿ ಆಯ್ತು. ನಾವು ಬಹುಶಃ 5 ರಿಂದ 6 ಗಂಟೆಗೆ ಹೋಗಿದ್ದು, ಊಟ, ತಿಂಡಿ ಏನೂ ಇರಲಿಲ್ಲ.

ನಾನು ಪ್ಲಾನ್‌ ಮಾಡಿ ಒಬ್ಬೊಬ್ಬ ಪೊಲೀಸನ್ನು ಒಂದೊಂದು ಕಡೆ ನಿಲ್ಲಿಸಿದೆ. ಸಬ್‌ಇನ್‌ಸ್ಪೆಕ್ಟರ್‌ ರಾಮಲಿಂಗಪ್ಪ ಅವರನ್ನು ಮನೆಯ ಮೇಲೆ ನಿಲ್ಲಿಸಿದ್ವಿ. ಅಕಸ್ಮಾತ್ ದಾಳಿ ಮಾಡಿದ್ರೆ, ಮೇಲಿಂದ ಅವರ ಮೇಲೆ ಫೈಯರ್‌ ಮಾಡಬೇಕು ಎಂಬುದು ನಮ್ಮ ಯೋಜನೆಯಾಗಿತ್ತು. ಹಿಡಿಯೊ ಅವಕಾಶ ಇದ್ರೆ, ಧುಮುಕಿ ಹಿಡಿಯಬೇಕು ಎಂದು ನಿರ್ದೇಶನ ಕೊಟ್ಟಿದ್ವಿ. ಅವರ ಜೊತೆಗೆ ಇನ್ನೊಬ್ಬ ಪೊಲೀಸ್‌ ಇರಲಿಲ್ಲ. ಆ ಮನೆಯ ಹಿಂಭಾಗದ ಮನೆಗೆ ಬಾಲಾಜಿ ಸಿಂಗ್‌, ಇನ್ನೊಂದು ಭಾಗದ ಮನೆಗೆ ಈಶ್ವರನ್‌, ಎದುರುಗಡೆ ಮನೆಗೆ ಎಂ.ಸಿ. ಶ್ರೀನಿವಾಸ್‌ ಅವರನ್ನು ನಿಲ್ಲಿಸಲಾಗಿತ್ತು. ನಾನು, ರಮೇಶ್‌ಚಂದ್ರ ಕಾಂಪೌಂಡ್‌ ಹತ್ತಿರ ಹೋಗಿ ಕೂರುವುದೆಂದು ಪ್ಲ್ಯಾನ್‌ ಮಾಡಿದ್ವಿ. ಎ.ಕೆ.47 ಇದೆ ದಯವಿಟ್ಟು ಹೋಗಬೇಡಿ ಎಂಬ ಪ್ರತಿಕ್ರಿಯೆ ಬಂತು. ಕಾಪೌಂಡ್‌ ಪಕ್ಕದಲ್ಲಿ ಒಂದು ಕಲ್ಲಿತ್ತು. ಅಲ್ಲಿ ಹೋಗಿ ಕೂತುಕೊಳ್ಳುವುದೆಂದು ನಿರ್ಧಾರವಾಯಿತು. ಮನೆಯ ಕಾಂಪೌಂಡ್‌ ಪಕ್ಕದವರೆಗೂ ಹೋದ್ವಿ. ನಾವು ಪೊಲೀಸ್‌ನವರು ಇದ್ದೇವೆ ಎಂಬುದು ಅವರಿಗೆ ಒಂಚೂರು ಗೊತ್ತೇ ಆಗಿಲ್ಲ. ಆದರೆ ಅವರ ಚಲನವಲನ ನೋಡಿದಾಗ ಅವರು ಯಾರಿಗೋ ಮಾಹಿತಿ ಕೊಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿತ್ತು. ರಾತ್ರಿ ಆ ರಸ್ತೆಯಲ್ಲಿ ವಾಹನಗಳು ಸಾಗಿದ ತಕ್ಷಣ ಮೇಲೆ ಓಡಿ ಹೋಗುತ್ತಿದ್ರು. ಆ ಗಾಡಿ ಬೇರೆ ಮಾರ್ಗದಲ್ಲಿ ಹೋದ್ರೆ ನಿರಾಸೆಯಿಂದ ಬರುವುದು ಕಾಣುತ್ತಿತ್ತು. ಕ್ಯಾಂಡಲ್‌ ಹಿಡಿದುಕೊಂಡು ಓಡಾಡುತ್ತಿದ್ರು.


ಅವರೆಲ್ಲ ಎಸ್ಕೇಪ್‌ ಆಗೋಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂಬುದು ತಿಳಿದ ನಂತರ, ನಮ್ಮ ಜೊತೆ ಒಬ್ಬೊಬ್ಬ ಕೆಎಸ್‌ಆರ್‌ಪಿ ಪೊಲೀಸ್‌ ಕಾನ್‌ಸ್ಟೆಬಲನ್ನು ಕೊಡುವಂತೆ ಕೇಳಿಕೊಂಡ್ವಿ. ಅವರು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಬಂದ್ರು. ನಮ್ಮ ಸುರಕ್ಷತೆ ಜೊತೆಗೆ ಅವರು ತಪ್ಪಿಸಿಕೊಂಡು ಹೋಗಬಾರದು ಎಂಬುದೂ ನಮ್ಮ ಉದ್ದೇಶವಾಗಿತ್ತು.


ರಾತ್ರಿ 12 ಗಂಟೆಗೆ ಜೋರು ಮಳೆ ಶುರುವಾಯಿತು. ಮನೆಯ ಮೇಲಿದ್ದ ರಾಮಲಿಂಗಪ್ಪ ನನಗೆ ಕಲ್ಲು ಹೊಡೆದು ಏನು ಎಂದು ಕೇಳಿದ್ರು. ನೀನು ಮಾತಾಡಬಾರದು ಅಲ್ಲೇ ಇರಬೇಕು ಅಂದೆ. ಅವನು ಇಳಿತೀನಿ ಅಂತಿದ್ದ. ಬೇಡ, ಜರ್ಕಿನ್‌ ತಲೆಗೆ ಹಾಕಿಕೊಂಡು ಕೂರು ಎಂದು ಅವನಿಗೆ ನಿರ್ದೇಶನ ಕೊಟ್ವಿ. ನಾನು, ರಮೇಶ್‌ಚಂದ್ರ ಜೊತೆ ಕೆಎಸ್‌ಆರ್‌ಪಿ ಕಾನ್‌ಸ್ಟೆಬಲ್‌ ಇದ್ರು, ಅವರು ರೈಫಲ್‌ ಹಿಡಿದುಕೊಂಡಿದ್ರು. ಕೆಎಸ್‌ಆರ್‌ಪಿ ಕಾನ್‌ಸ್ಟೆಬಲ್‌ ಉಸಿರಾಡುವುದನ್ನು ಬಿಟ್ರೆ ಚೂರೂ ಅತ್ತ, ಇತ್ತ ನೋಡುತ್ತಿರಲಿಲ್ಲ. ಅವರ ಡೆಡಿಕೇಷನ್‌, ಏಕಾಗ್ರತೆ ಮೆಚ್ಚಲೇಬೇಕು. ಮಳೆಯಲ್ಲೇ ಕೂತಿದ್ವಿ. ಒಬ್ಬರು ಎದ್ರೆ, ಎಲ್ಲರೂ ಏಳುತ್ತಾರೆ. ಹಾಗಾಗಿ ಅಲ್ಲಾಡಲಿಲ್ಲ. ಮಳೆ ನೀರು ಹರಿಯಲು ಶುರುವಾಯಿತು. ನಮ್ಮ ಸೊಂಟದವರೆಗೆ ನೀರು ಬಂತು. ಕೊಚ್ಚೆ, ಲದ್ದಿ, ಗಿಡ ಗಂಟಿ ಎಲ್ಲವೂ ಕೊಚ್ಚಿಕೊಂಡು ಬರುತ್ತಿತ್ತು. ರಮೇಶ್‌ಚಂದ್ರ, ಅಣ್ಣಾ, ಸಗಣಿ, ಕಪ್ಪೆ ಅಂತೆಲ್ಲ ಅನ್ನುತ್ತಿದ್ದ, ಏನು ಮಾಡೋದಕ್ಕೆ ಆಗೊಲ್ಲ ಕೂತ್ಕೋ ಅನ್ನುತ್ತಿದ್ದೆ. ಹಾವು ಬಂದ್ರೆ ಏನು ಮಾಡೋದು ಅಂದ. ಏನೂ ಮಾಡೋಕ್ಕೆ ಆಗಲ್ಲ ಅಂದೆ. ಅವನು ನಾನು ಆತ್ಮೀಯ ಸ್ನೇಹಿತರು. ಒಟ್ಟಿಗೆ ಬಹಳಷ್ಟು ಕಾರ್ಯಾಚರಣೆ ಮಾಡಿದ್ದೇವೆ.


ಕೊನೆಗೆ ನೀರು ಎದೆಮಟ್ಟಕ್ಕೆ ಬಂತು. ಮಳೆಗೆ ಹೆದರಿ ಹಳ್ಳದಿಂದ ಮೇಲೆ ಬಂದ್ರೆ ಅವರಿಗೆ ಕಾಣಿಸುತ್ತೆ ಅನ್ನುವ ಆತಂಕ. ಮಳೆ ನೀರಿಗೆ ಪಿಸ್ತೂಲ್‌ ಹಾಳಾಗುತ್ತದೆ ಎಂದು ಬಾಯಲ್ಲಿ ಕಚ್ಚಿಕೊಂಡು ಇಟ್ಟುಕೊಂಡ್ವಿ. ಕೆಎಸ್‌ಆರ್‌ಪಿ ಅವರಿಗೆ ತರಬೇತಿ ಇರುತ್ತೆ. ಅವರು ನೀರಿನಲ್ಲಿ ನೆನೆಯದ ಹಾಗೆ ರೆಡಿ ಇಟ್ಟುಕೊಂಡ್ರು, ನೆನೆಯಲ್ವಾ ಅಂದಿದ್ದಕ್ಕೆ ನಾನು ಇಟ್ಟುಕೊಳ್ಳುತ್ತೇನೆ ಅಂದ್ರು. ಅವರು ಇದ್ದಿದ್ದಕ್ಕೆ ನಮಗೆಷ್ಟು ಧೈರ್ಯ ಮತ್ತು ಬಲ ಬಂತು ಅಂದ್ರೆ, ಅವರೆಲ್ಲ ಈಚೆ ಬಂದಿದ್ರೆ ಇವರು ಹೊಡೆದು ಹಾಕಿ ಬಿಡೋರು. ಅಷ್ಟು ಪವರ್‌ಫುಲ್‌ ವೆಪನ್‌ ಅವರ ಬಳಿಯಿತ್ತು. ನಮ್ಮ ಬಳಿ ಇದ್ದಿದ್ದು ಪಿಸ್ತೂಲ್‌.


ಬೆಳಿಗ್ಗೆ ಆಯ್ತು. ಮಳೆ ನಿಲ್ಲುತ್ತಿರಲಿಲ್ಲ. ಕಡಿಮೆ, ಜಾಸ್ತಿ ಆಗುತ್ತಲೇ ಇತ್ತು. ಕಾರ್ಯಾಚರಣೆಯನ್ನು ಅರ್ಧಕ್ಕೆ ಬಿಟ್ರೆ ನಾವು ಹೇಡಿಗಳಾಗುತ್ತೇವೆ. ಪೊಲೀಸ್‌ ಸೇವೆಯಲ್ಲಿ ಹೇಡಿತನಕ್ಕಿರುವ ಕನಿಷ್ಠ ಶಿಕ್ಷೆ ಅಂದ್ರೆ ಡಿಸ್‌ಮಿಸ್‌. ಹೇಡಿಗಳು ಇದ್ದಾರೆ. ಆದರೆ, ಅವರು ಡಿಸ್‌ಮಿಸ್‌ ಆಗೊಲ್ಲ. ರಾಷ್ಟ್ರಪತಿ ಪ್ರಶಸ್ತಿ ತೆಗೆದುಕೊಂಡಿರುವವರೂ ಇದ್ದಾರೆ. ಯುವ ಪೊಲೀಸ್‌ನವರು ಇದ್ರು. ಹುಡುಗಾಟಿಕೆಯವರು. ನನಗೆ ಕಲ್ಲು ಹೊಡೆದು ಅಣ್ಣಾ ಅನ್ನುತ್ತಿದ್ರು. ನಾನು ಸುಮ್ನೆ ಕೂತ್ಕೋಬೇಕು ಅಲ್ಲೇ ಅನ್ನುತ್ತಿದ್ದೆ. ಯಾರೂ ಅಲ್ಲಾಡಲಿಲ್ಲ. ಈಶ್ವರನ್‌ ಅವರಿಗೆ ಮನೆ ಸಿಕ್ಕಿತ್ತು.


ಬೆಳಿಗ್ಗಿನ ಜಾವ 4 ಗಂಟೆಗೆ ಮಳೆ ಕಮ್ಮಿ ಆಗ್ತಾ ಬಂತು. ಐದು ಗಂಟೆಗೆ ಜನ ಹೊರಗೆ ಬರಲು ಶುರುವಾದ್ರು. ಬಯಲು ಶೌಚಾಲಯ. ಒಬ್ರು ಚೆಂಬು, ಬಕೆಟ್‌, ಡಬ್ಬ... ಹಿಡಿದುಕೊಂಡು ಬರುತ್ತಿದ್ರು. ನಾವು ಕಾಣಿಸಬಾರದೆಂದು ಹೇಗೋ ತಪ್ಪಿಸಿಕೊಂಡು ಕೂರುತಿದ್ವಿ. ಆದ್ರೂ, ಕಂಡುಬಿಟ್ವಿ. ನಾವು ಪೊಲೀಸ್‌ನವರು ಎಂದು ಹೇಳಿ ಕಳುಹಿಸಿದ್ವಿ. ಆದರೆ, ಅದು ಗುಲ್ಲಾಗಿ ಎಲ್ಲ ಕಡೆ ಜನ ಸೇರಿಕೊಂಡು ಬಿಟ್ರು. ನಾವು ಹೇಳಿದ್ವಿ, ಅಲ್ಲಿ ಇರುವವರು ಎಲ್‌ಟಿಟಿಇ ಅವರು. ಅವರ ಹತ್ತಿರ ಎಕೆ 47 ಇದೆ. ಅವರು ಫೈಯರ್‌ ಮಾಡಿದ್ರೆ ನಿಮ್ಮ ತನಕ ಬರುತ್ತೆ ಹೋಗಿ ಅಂದ್ರೆ ಅವರಿಗೆ ಆ ಕಾಮನ್‌ ಸೆನ್ಸ್‌ ಇರಲಿಲ್ಲ. ನಮ್ಮ ತನಿಖೆಗೆ ಅಡಚಣೆ ಮಾಡಬಾರದು. ಸಹಕಾರ ಕೊಡಬೇಕು ಅನ್ನೋದೇ ಇರಲಿಲ್ಲ. ಅವರಿಗೆ ಕುತೂಹಲ. ಅಲ್ಲಲ್ಲಿ ಮನೆಗಳ ಮೇಲೆ, ಬಿಲ್ಡಿಂಗ್‌ ಮೇಲೆ, ದೂರದ ಬಿಲ್ಡಿಂಗ್‌ ಮೇಲೆಲ್ಲ ಸೇರಿಕೊಳ್ಳಲು ಶುರು ಮಾಡಿದ್ರು. ಮಾಧ್ಯಮದವರು ಬರೋಕೆ ಶುರು ಮಾಡಿದ್ರು. ಆಗ ಪ್ರಿಂಟ್‌ ಮೀಡಿಯಾನೇ ಹೆಚ್ಚು ಇದ್ದಿದ್ದು, ಕದ್ದುಮುಚ್ಚಿ ಅವರ ಬಳಿ ಹೋಗಿ, ಘಟನೆಯನ್ನು ವಿವರಿಸಿ ಸಹಕಾರ ಕೊಡುವಂತೆ ತಿಳಿಸಿದೆ. ಆಗ, ಅವರು ಆಯ್ತು ಎಂದು ಹೇಳಿ ಹಿಂದಕ್ಕೆ ಹೊರಟು ಹೋದ್ರು.


ಮತ್ತೆ ಎಲ್ಲ ಕಾಯ್ದುಕೊಂಡು ಕೂತ್ವಿ. ಜನ ಹೋಗುತ್ತಿರಲಿಲ್ಲ. ಜನರ ನಿಯಂತ್ರಣಕ್ಕೆ ನಮ್ಮದೊಂದು ಫೋರ್ಸ್‌ ಬಂತು. ಜನಗಳಿಗೆ ಅರ್ಥವೇ ಆಗುತ್ತಿರಲಿಲ್ಲ. ತಪ್ಪಿಸಿಕೊಂಡು ಬಂದು ನೋಡುತ್ತಿದ್ರು. ಭಾನುವಾರ ಸಂಜೆ ನಾವು ಹೋಗಿದ್ದು. ಸೋಮವಾರ ಸಂಜೆ ನಾಲ್ಕು ಗಂಟೆಗೆ ಡಿಸಿಪಿ ಕೆಂಪಯ್ಯ ಬಂದ್ರು. ನಾನು ಕಣ್ತಪ್ಪಿಸಿಕೊಂಡು ಹೋಗಿ ಘಟನೆಯ ವಿವರ ನೀಡಿದೆ. ನಿನ್ನೆಯಿಂದ ಅಲ್ಲೇ ಕೂತಿದ್ದೇವೆ ಅಂದೆ. ಊಟಕ್ಕೆ ಏನು ಮಾಡಿದ್ರಿ ಅಂದ್ರು. ಊಟ ಅಲ್ಲ ಸರ್‌. ನಾವು ನೀರೂ ಕುಡಿದಿಲ್ಲ ಅಂದೆ. ಯಾರೂ ಕಾಫಿ, ಟೀ ಕೊಟ್ಟಿಲ್ವಾ ಅಂದ್ರು. ಯಾರೂ ಕೊಟ್ಟಿಲ್ಲ ಅಂದೆ. ಅವರಿಗೆ ಎಷ್ಟು ಬೇಜಾರಾಗಿ ಹೋಯ್ತು ಅಂದ್ರೆ. ಅಲ್ಲಿದ್ದ ಲೋಕಲ್‌ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ಗೆ ನಮ್ಮಗೆಲ್ಲ ಕಾಫಿ, ತಿಂಡಿ ವ್ಯವಸ್ಥೆ ಮಾಡುವಂತೆ ಹೇಳಿದ್ರು. ಆಗ ನಾವು, ಇಲ್ಲ ಸರ್‌, ತಿಂಡಿ ತಿನ್ನೋಕೆ ಈಗ ಆಗಲ್ಲ. ಕಾಫಿ ಕೊಟ್ರೆ ಸಾಕು ಅಂದ್ವಿ. ಕಾಫಿ ತಂದ್ರು. ಅವನು ಮನೆಯಿಂದ ಸಾವಿರ ಅಡಿ ದೂರದಿಂದ ಕಾಫಿ ಕುಡಿಯುವಂತೆ ನಮ್ಮನ್ನು ಕರೆದ. ಇಲ್ಲಿಗೆ ತಂದುಕೊಡು ಎದ್ದು ಬರಲು ಆಗುವುದಿಲ್ಲ ಅಂದ್ರೆ. ನಾನು ತಂದುಕೊಡಲ್ಲ ಅಂದ. ಅವರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೇಸ್‌ ಅದು. ನನಗೆ ಬಹಳ ಬೇಸರ ಆಯ್ತು. ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಅವನು. ನಾನು ಮರೆಯಲ್ಲಿ ಹೋಗಿ, ಏನಪ್ಪ ನಿನಗೆ ಕಾಫಿ ತಂದುಕೊಡಕ್ಕೆ ಆಗಲ್ವಾ ಅಂದ್ರೆ, ಅವನು ಹೂನಪ್ಪ ನೀನು ಹೇಳ್ತೀಯಾ, ಅಲ್ಲಿರುವವರು ಎಲ್‌ಟಿಟಿಇ ಅವರು. ತಲೆ ಗಟ್ಟಿ ಇದೆ ಎಂದು ಬಂಡೆಗೆ ಹೊಡೆದುಕೊಳ್ಳಲು ಆಗುತ್ತಾ ಅಂದುಬಿಟ್ರು. ನನಗೆ ಈ ತರಹದವರೂ ಇದ್ದಾರಾ ಪೊಲೀಸ್‌ ಇಲಾಖೆಯಲ್ಲಿ ಅನಿಸಿಬಿಡ್ತು. ಆ ಕಾನ್‌ಸ್ಟೆಬಲ್ ಗಳಿಗೆ ಇರುವಷ್ಟು ಡೆಡಿಕೇಷನ್‌ ಇವರಿಗೆ ಇಲ್ವಲ್ಲಾ ಎಂದು ಬೇಜಾರಾಗಿ ಸುಮ್ಮನಿದ್ದೆ. ಕಾಫಿ ಕುಡಿಯೋದಕ್ಕೆ ಆಗಲಿಲ್ಲ. ಎಲ್ರೂ ಬೇಡ ಅಂದ್ರು.


ಸೋಮವಾರ ರಾತ್ರಿ ಆಗೋಯ್ತು. ಎಲ್‌ಟಿಟಿಇ ಅವರಿಗೂ ಟ್ರ್ಯಾಪ್‌ ಆಗಿದೆ ಅನ್ನೋದು ಗೊತ್ತಾಗಿರುತ್ತೆ. ಜನ ಸೇರಿರೋದು, ಪೊಲೀಸ್‌ ಎಲ್ಲ ಇರೋದು ಗೊತ್ತಾಗಿರುತ್ತೆ. ಸಿಬಿಐ ಅವರು ಬರುವವರೆಗೂ ಕಾಯಿರಿ ಅಂದ್ರು. ನಾವು ಇಲ್ಲ ಸರ್‌ ಕಾಯೋಕ್ಕೆ ಆಗೊಲ್ಲ. ಟಿಯರ್‌ ಗ್ಯಾಸ್‌ ಹೊಡೆದು, ಅವರನ್ನೆಲ್ಲ ಮೂರ್ಛೆ ತಪ್ಪಿಸಿ ನುಗ್ಗುತ್ತೇವೆ ಅಂದ್ವಿ. ಬೇಡ, ಬೆಳಿಗ್ಗೆ ಎಲ್ರೂ ಬರುತ್ತಿದ್ದಾರೆ. ಕಾರ್ತಿಕೇಯನ್‌, ಕಮಿಷನರ್‌, ಸಿಬಿಐ ಚೀಫ್‌ ಬರುತ್ತಿದ್ದಾರೆ. ನೀವು ಮತ್ತು ರಮೇಶ್‌ಚಂದ್ರ ಜಯನಗರಕ್ಕೆ ಬಂದು ಅವರಿಗೆ ಘಟನೆಯ ಕುರಿತು ವಿವರಿಸಿ ಅಂತಾ ಹೇಳಿದ್ರು. ನಾನು ರಮೇಶ್‌ಚಂದ್ರ ಹೋಗಿ ಹೇಳಿದ್ವಿ. ಮೊದಲಿಗೆ ಕಮಿಷನರ್‌ ಕೇಳಿದ್ರು ಹೇಗಿದೆ ಸ್ಥಿತಿ ಅಂದ್ರು. ಹೀಗಿದೆ ಎಂದು ವಿವರಿಸಿದೆ. ನೀವೇನು ಪ್ಲ್ಯಾನ್‌ ಮಾಡಿದ್ದೀರಿ ಅಂದ್ರು. ಬಾಗಿಲು ಒಡೆದು ಒಳಗೆ ಹೋಗಿ ಹಿಡಿಯಬೇಕು ಅಂತಿದ್ದೀವಿ ಅಂದೆ. ಅವರು ಒಂದು ಸ್ಮೈಲ್‌ ಕೊಟ್ಟು, ಅವರ ಹತ್ತಿರ ಎ.ಕೆ47 ಇದೆ ಗೊತ್ತಾ ಅಂದ್ರು. ಗೊತ್ತು ಅಂದೆ. ಆದ್ರೂ ಹೋಗ್ತೀರಾ ಅಂದ್ರು. ಹೌದು ಅಂದೆ. ಅವರು ಖಂಡಿತ ಹೊಡೆಯುತ್ತಾರೆ ಅಂದ್ರು. ಹೊಡೀಲಿ ಸರ್‌, ನಾವು ಬರೆದುಕೊಡ್ತೇವೆ ಅಂದ್ರು ರಮೇಶ್‌ಚಂದ್ರ. ರಮೇಶ್‌ಚಂದ್ರ ಅವರ ತಂದೆ ನಾಗರಾಜ್‌ ರಾವ್‌ ಎಂದು, ಅವರೂ ಪೊಲೀಸ್‌ ಆಫೀಸರ್‌. ಅವರು ಕ್ರಿಮಿನಾಲಜಿ ಉಪನ್ಯಾಸ ಮಾಡುತ್ತಿದ್ರು. ಈ ಐಪಿಎಸ್‌ ಅಧಿಕಾರಿಗಳಲ್ಲಿ ಹಲವರು ಅವರ ಶಿಷ್ಯರಾಗಿದ್ರು. ನೀನು ನಾಗರಾಜ್‌ ಅವರಿಗೆ ಉಳಿದಿರೋ ಒಬ್ಬನೇ ಮಗ ಅಂದ್ರು ಕಮಿಷನರ್‌. ನಾನು, ಶಿವರಾಂ ಇಬ್ರೂ ಬರೆದುಕೊಡ್ತೇವೆ ನಾವು ಒಳಗೆ ನುಗ್ಗುತ್ತೇವೆ ಸರ್ ಅಂದ್ರು ಅವರು. ಅವರೂ ಇಬ್ಬರಿಗೂ ಬೆನ್ನು ತಟ್ಟಿ ‘ಐ ಆ್ಯಮ್‌ ವೆರಿ ಪ್ರೌಢ್‌ ಆಫ್‌ ಯೂ ಫೆಲೋಸ್‌’ ಅಂದ್ರು. ಮೊದಲಿನಿಂದಲೂ ನಿಮ್ಮನ್ನು ನಂಬುತ್ತಿದ್ದೆ. ಇವತ್ತಂತೂ ನನಗೆ ವಿವರಿಸಲು ಪದಗಳೇ ಇಲ್ಲ ಎಂದು ಪ್ರಶಂಸಿಸಿದರು. ನೀವಲ್ಲಿಗೆ ಹೋಗ್ತೀರಾ ಎಂದು ಕಾರ್ತಿಕೇಯನ್‌ ಬಂದು ಕೇಳಿದ್ರು. ಅದಕ್ಕೆ ರಾಮಲಿಂಗಯ್ಯನವರು ಕಾರ್ತೀಕೇಯನ್ ಅವರಿಗೆ ಹೇಳಿದ್ರು. ಖಂಡಿತ ಹೋಗ್ತಾರೆ. ಬೆಂಗಳೂರಿನ ಮೇಜರ್‌ ಕಾರ್ಯಾಚರಣೆಯನ್ನು ಇವರೇ ಮಾಡುವುದು ಅಂದ್ರು. ಕಾರ್ತಿಕೇಯನ್‌ ಅವರಿಗೂ ಖುಷಿ ಆಯ್ತು. ಎಲ್‌ಟಿಟಿಇ ಅವರು ತಪ್ಪಿಸಿಕೊಂಡು ಹೋಗದೇ ಇರುವುದೇ ದೊಡ್ಡ ವಿಷಯ ಅಂದ್ರು. ಅವರೆಲ್ಲೂ ಈ ರೀತಿಯ ಟ್ರ್ಯಾಪ್‌ ಆಗಿದ್ದೇ ಇರಲಿಲ್ಲ.


ಒಳಗೆ ನುಗ್ಗುವುದು ಯಾರು ಎಂಬ ಚರ್ಚೆ ಆಯ್ತು. ಸ್ಪೆಷಲ್‌ ಟೀಮ್‌ ಬರುತ್ತೆ. ನೀಮಚ್ ನಿಂದ ಬರುತ್ತದೆ. ಟ್ರೈನಿಂಗ್‌ ಕ್ಯಾಂಪ್‌ನಲ್ಲಿ ಇದ್ದಾರೆ ಅವ್ರು. ವಿಶೇಷ ವಿಮಾನದಲ್ಲಿ ಬರುತ್ತಾರೆ. ನೀಮಚ್ ಮಧ್ಯಪ್ರದೇಶದಲ್ಲಿದೆ. ಅಲ್ಲಿಂದ ರಾತ್ರಿ ಬಿಡ್ತಾರೆ. ಬ್ಲ್ಯಾಕ್‌ ಡ್ರೆಸ್ಡ್ ಕಮಾಂಡೋಸ್. ಎಸ್‌ಪಿಜಿಯಿಂದ ಸೆಲೆಕ್ಟ್‌ ಆಗಿರೋರು. ಕ್ಯಾಪ್ಟನ್‌ ಕುಮಾರ್‌ ಎಂದು ಬರ್ತಾರೆ ಅವರು ನುಗ್ತಾರೆ ಅಂದ್ರು. ನಮಗೆ ಹೆಚ್ಚುವರಿ ಫೋರ್ಸ್‌ ಕೊಟ್ರು. ಕೆಎಸ್‌ಆರ್‌ಪಿ ವಿಶೇಷ ಟೀಂ ಅದು. ಸ್ಟ್ರ್ಯಾಟಜಿಕ್ ಪಾಯಿಂಟ್ಸ್‌ ಅಂತಾ ಇರುತ್ತೆ. ಮನೆ ಇಲ್ಲಿದೆ ಅಂದ್ರೆ, ಅದೆಲ್ಲೋ ಮಹಡಿಯಿಂದ ನಮ್ಮ ಪೊಲೀಸ್‌ ನವರು ಫೈಯರ್ ಮಾಡ್ತಾರೆ. ಅಷ್ಟು ದೂರದಿಂದ ಫೈಯರ್‌ ಮಾಡುವುದು. ಕೆಳಗಿನಿಂದ ಫೈಯರ್‌ ಮಾಡುವುದು ಸುಲಭ. ಆ ಸ್ಟ್ರ್ಯಾಟಜಿಕ್ ಪಾಯಿಂಟ್ಸ್‌ ಗಳನ್ನೆಲ್ಲ ಕೆಂಪಯ್ಯ ಮತ್ತು ಕಾರ್ತಿಕೇಯನ್‌ ಅವರು ಗುರುತು ಮಾಡಿದ್ರು. ಭಾನುವಾರ ಹೋಗಿದ್ದು. ಮಂಗಳವಾರ ರಾತ್ರಿ ಇಷ್ಟು ಜನ ಬರೀ ಕಾಫಿ, ಬಿಸ್ಕತ್‌ ಮಾತ್ರ ತಿಂದಿದ್ವಿ.


ಮುಂದುವರೆಯುವುದು…

ಸಂದರ್ಶಕರು - ಕೆ.ಎಸ್. ಪರಮೇಶ್ವರ33 views