5 ಸ್ಟಾರ್‌ ಹೋಟೆಲ್‌ ರೂಂ ಅಲ್ಲಿ ಡಾ. ರಾಜ್‌ ನೆಲದ ಮೇಲೆ ಮಲಗ್ತಿದ್ರ್ದಂತೆ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 33


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ನಾದಮಯ ಹಾಡು ರಾಷ್ಟ್ರಪತಿಗಳ ಸ್ವರ್ಣ ಕಮಲ ಪದಕ ಪಡೆದುಕೊಂಡಿತು. ಭಾರತದ ಉತ್ತಮ ಹಾಡು ಎಂಬ ಹೆಗ್ಗಳಿಕೆ ಪಡೆಯಿತು. ರಾಜ್‌ಕುಮಾರ್‌ ಅವರು ಅದನ್ನು ಎಷ್ಟು ಚೆನ್ನಾಗಿ ಹಾಡಿದ್ರು ಎಂದ್ರೆ, ಅವರಂತಹ ಗಾಯಕ, ನಾಟಕ ನಟ ಇಲ್ಲ ಎನಿಸಿಬಿಡುತ್ತದೆ. ‘ಸಂಪತ್ತಿಗೆ ಸವಾಲ್‌’ ಆದ ಮೇಲೆ ಅವರ ಎಲ್ಲ ಸಿನಿಮಾಗಳಿಗೂ ಅವರೇ ಹಾಡಿದ್ರು. ನಾಯಕ ನಟರೇ ಗಾಯಕರಾಗಬೇಕು ಎಂದು ಕೆಲವರು ಪ್ರಯತ್ನಿಸಿದರೂ ಅವರು ಖ್ಯಾತಿ ಗಳಿಸಲಿಲ್ಲ. ಅದು ವಿಷಾದಕರವಾದ ಸಂಗತಿ. ಕೆಲವರು ನಟರಿಗೆ ಹಾಡುವ ಶಕ್ತಿ ಇದ್ರೂ, ಯಾಕೆ ಜನಪ್ರಿಯರಾಗಿಲ್ಲ ಎಂಬುದು ಗೊತ್ತಿಲ್ಲ. ಬಹುಶಃ ಹಾಡುಗಳ ಆಯ್ಕೆಯೂ ಅದಕ್ಕೆ ಕಾರಣವಿರಬಹುದು. ನಟನಿಗೆ ಮೊದಲ ಸಿನಿಮಾ ಮತ್ತು ಗಾಯಕನಿಗೆ ಮೊದಲ ಹಾಡು ಅವರ ಯಶಸ್ಸಿಗೆ ಬಹಳ ಮುಖ್ಯ ಕಾರಣವಾಗುತ್ತದೆ. ವಿಜಯಪ್ರಕಾಶ್‌ ‘ಜೈ ಹೋ’ ಹಾಡು ಹೇಳದೇ ಇದಿದ್ದರೆ ಅವರನ್ನು ಯಾರೂ ಕೇಳುತ್ತಲೇ ಇರಲಿಲ್ಲ. ರಾಜ್‌ಕುಮಾರ್‌ ಹಾಡಿದ್ದ ‘ಯಾರೇ ಕೂಗಾಡಲಿ’ ಹಾಡು ಬಂಪರ್‌ ಹಿಟ್‌ ಕಂಡಿದ್ದರಿಂದ ಅವರು ಹಾಡುಗಾರರು ಆಗುವಂತಾಯಿತು. ಆಗೆಲ್ಲ ನಾಟಕಗಳಲ್ಲಿ ಗಾಯಕರೇ ನಟರಾಗಿರಬೇಕೆತ್ತು.


‘ನಾದಮಯ’ ಹಾಡಿಗೆ ಸ್ವರ್ಣಕಮಲ ಪ್ರಶಸ್ತಿ ಬಂದಾಗ, ಸ್ವೀಕರಿಸಲು ನಾನು ಹೋಗಿದ್ದೆ. ಅಲ್ಲಿ ನಮಗೆ 6 ಸ್ಟಾರ್‌ ಹೋಟೆಲ್‌ನಲ್ಲಿ ವ್ಯವಸ್ಥೆ ಮಾಡಿದ್ರು. ರಾಜ್‌ಕುಮಾರ್‌ ಅವರು ಬೆಡ್‌ ಮೇಲಿದ್ದ ಬಿಳಿ ಬೆಡ್‌ಶೀಟ್‌ ಮತ್ತು ತಲೆದಿಂಬು ತೆಗೆದುಕೊಂಡು ನೆಲದ ಮೇಲೆ ಹಾಸಿ ಮಲಗಿದ್ರು. ರಾಜ ಸುಪರ್ಧಿಗೆ ಕೊಟ್ಟಿದ್ದಾರೆ ಅಲ್ಲಿ ಮಲಗುವ ಬದಲು ಕೆಳಗೆ ಮಲಗುತ್ತಿದ್ದೀರಲ್ಲ ಎಂದು ಕೇಳಿದೆ. ಅದಕ್ಕವರು ‘ನನಗೆ ಇಲ್ಲಿ ಮಲಗಿದರೇನೇ ನಿದ್ದೆ ಬರುವುದು. ಮೇಲೆ ಮಲಗಿದರೆ ನಿದ್ದೆ ಬರುವುದಿಲ್ಲ’ ಎಂದು ಹೇಳಿದ್ರು. ಅವರು ಎಲ್ಲೇ ಹೋದ್ರು, ವಿದೇಶಕ್ಕೆ ಹೋದರೂ ಅಲ್ಲಿ ಯಾವುದೇ ಹೋಟೆಲ್‌ನಲ್ಲಿ ವ್ಯವಸ್ಥೆ ಮಾಡಿದ್ರೂ ನೆಲದ ಮೇಲೆಯೇ ಮಲಗುತ್ತಿದ್ರು. ಅಷ್ಟೊಂದು ಸರಳ ಜೀವನ ಅವರದು. ಎಷ್ಟು ಬಡಿಸುತ್ತಾರೋ ಅಷ್ಟನ್ನೇ ತಿನ್ನುತ್ತಿದ್ರು. ತಿನ್ನಲು ಇದೇ ಬೇಕು, ಅದೇ ಬೇಕು ಎನ್ನುತ್ತಿರಲಿಲ್ಲ. ಅನ್ನದ ಒಂದು ಅಗಳನ್ನು ಬಿಡುತ್ತಿರಲಿಲ್ಲ. ಆ ಕಲಾವಿದನ ಬಗ್ಗೆ ಎಷ್ಟು ಹೊಗಳಿದರೂ ಸಾಲದು. ಅಂತಹ ವ್ಯಕ್ತಿತ್ವ ಅವರದು.


ಪ್ರಶಸ್ತಿ ನೀಡುವ ಸಲುವಾಗಿ ರಾಜ್‌ಕುಮಾರ್‌ ಅವರನ್ನು ದೆಹಲಿಗೆ ಕರೆಸಿದ್ರು. ‘ಪ್ರಶಸ್ತಿ ಹಿಂದೆ ನಾವು ಹೋಗಬಾರದು ಭಗವಾನ್‌, ಪ್ರಶಸ್ತಿಗಳು ನಮ್ಮನ್ನು ಹುಡುಕಿಕೊಂಡು ಬರಬೇಕು. ಅದು ನಮ್ಮ ಜೀವನದ ಧ್ಯೇಯವಾಗಿರಬೇಕು’ ಎಂದು ಅವರು ಹೇಳುತ್ತಿದ್ರು.
ಮುಂದುರೆಯುವುದು...

24 views