EP1: “ಹೇಗಿದ್ದೀಯೋ ಅವಿವೇಕಿ?!!” - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ

Updated: Jan 24, 2021

ಬೆಳಿಗ್ಗೆ 8 ಗಂಟೆ. ಜುಲೈ 27, 2018, ಸುಮಾರು. ಎಂದಿನಂತೆ ಬೆಲ್ಲದ ಟೀ ಕುದಿಸಿ ಲೋಟಕ್ಕೆ ಸುರಿದು ನನ್ನ ಹೆಂಡತಿ ಸವಿತಾಳಿಗೆ ಒಂದು ಲೋಟ ಕೊಟ್ಟು ನಾನೊಂದು ಲೋಟ ಕೈಲಿ ಹಿಡಿದು ಪಾರ್ಲೆಜಿ ಬಿಸ್ಕೆಟ್ ಜೊತೆ ಬೆಳಗಿನ ಚಹಾ ಕುಡಿಯಲು ತೊಡಗುವ ಮೊದಲು ಪೇಪರ್ ಹುಡುಗ ಗಿರಿ ಇವತ್ತಿನ ಪತ್ರಿಕೆ ಹಾಕಿದ್ದಾನ ಅಂತ ಬಾಗಿಲ ಹೊರಗೆ ನೋಡಿದೆ. 27 ವರ್ಷಗಳ ಹಿಂದೆ ಅವಿದ್ಯಾವಂತನಾದ ನನ್ನಪ್ಪನಿಂದ ನನಗೆ ಪರಿಚಯವಾದ 'ಪ್ರಜಾವಾಣ ’ ಅಸ್ತವ್ಯಸ್ತವಾಗಿ ರೈಲ್ವೇ ಹಳಿಗಳ ಮೇಲೆ ಪ್ರಾಣ ಬಿಟ್ಟ ವಲಸೆ ಕಾರ್ಮಿಕರ ದೇಹಗಳಂತೆ ಮೆಟ್ಟಿಲುಗಳ ಮೇಲೆಲ್ಲಾ ಹರಡಿಕೊಂಡು ಬಿದ್ದಿತ್ತು. ಒಂದು ಒಂದೂವರೆ ಗಂಟೆಗಳ ಕಿರು ಅವಧಿಯೊಳಗೆ 300+ ಪೇಪರ್ ಹಾಕಿ ಮುಂದಿನ ಕೆಲಸಕ್ಕೆ ಓಡುವ ಗಿರಿಗೆ ಎರಡು ಫ್ಲೋರ್ ಹತ್ತಿಕೊಂಡು ಬಂದು ಪೇಪರ್ ಹಾಕಿ ಹೋಗು ಅಂತ ಯಾವ ಬಾಯಲ್ಲಿ ಹೇಳಲಿ ಅನ್ನಿಸಿ ಚೆಲ್ಲಾಪಿಲ್ಲಿಯಾಗಿದ್ದ ಪ್ರಜಾವಾಣ ಯನ್ನ ಒಂದುಗೂಡಿಸಿ ಒಳಗೆ ಬಂದು ಚಹಾ, ಪಾರ್ಲೆಜಿ ಜೊತೆಗೆ ಅಂದಿನ ಸುದ್ದಿ ಮೇಯತೊಡಗಿದೆ. “ಅರ್ಧ ಕೆಜಿ ಜಾಮೂನ್ ಪ್ಯಾಕೆಟ್ ತಂದುಕೊಡ್ತೀಯ ಮಧ್ಯಾಹ್ನಕ್ಕೆ ಜಾಮೂನ್ ಮಾಡ್‍ಕೊಡ್ತೀನಿ” ಅಂದಳು ಸವಿ. ಅವತ್ತು ನನ್ ಹ್ಯಾಪಿ ಬರ್ತಡೇ! ಹತ್ತನೇ ಕ್ಲಾಸ್ ಮಾಕ್ರ್ಸ್ ಕಾರ್ಡ್ ಪ್ರಕಾರ! ಖುಷಿಯಿಂದ “ಓ ಆಗಬಹುದು ಮೇಡಂ!” ಅಂದೆ. “ಹೂಂ, ಜಾಮೂನ್ ಮಿಕ್ಸ್ ತಂದು ಕೊಟ್ಟು ಕಸ ಗುಡಿಸಿ ನೆಲ ಒರೆಸಿಬಿಟ್ಟು ನಿನ್ ಕೆಲಸ ನೀನ್ ಮಾಡ್ಕೊತಿರು. ಅಷ್ಟರಲ್ಲಿ ನಾನು ಜಾಮೂನ್ ಮಾಡ್‍ಬಿಡ್ತೀನಿ” ಖಡಕ್ಕಾಗಿ ಹೇಳಿ ಪಾರ್ಲೆಜಿ ಮುರಿದು ಚಹಾಗೆ ಅದ್ದಿ ಬಾಯಿಗಿಟ್ಟಳು. “ಏಯ್ ಆಗೋದಿಲ್ಲ ಬೇಕಾದ್ರೆ ಮಾಡು ಇಲ್ಲಾಂದ್ರೆ ಬಿಟ್ಟಾಕು” ಎಂದು ಹೇಳಿಬಿಡಬೇಕು ಅನ್ನಿಸಿತು. ಹೇಳಲಿಲ್ಲ! ಮೌನವಾದೆ. ಅಂದರೆ ಒಪ್ಪಿಕೊಂಡೆ. ಹಾಗೇ ಮೌನವಾಗಿ ಚಹಾ ಹೀರುತ್ತಲೇ ಮನೆ ಸ್ವಚ್ಛಗೊಳಿಸಲು ಮಾನಸಿಕವಾಗಿ ತಯಾರಾಗುವ ಹೊತ್ತಿಗೆ ಫೋನ್ ರಿಂಗಣಸಿತು. ಚಾರ್ಜ್ ಇಟ್ಟಿದ್ದ ಫೋನ್ ತೆಗೆದೆ, ನೋಡಿದೆ, ನಾಗ್ತಿಹಳ್ಳಿ ಮೇಷ್ಟ್ರು ಅಂತ ಫೋನ್‍ನ ಸ್ಕ್ರೀನ್ ತೋರಿಸುತ್ತಿತ್ತು. ಸಾಮಾನ್ಯ ಮೇಷ್ಟ್ರು ಸುಖಾಸುಮ್ಮನೆ ಕರೆ ಮಾಡೋರಲ್ಲ. ವಿಷಯ ಬಹಳ ಮುಖ್ಯವಲ್ಲದಿದ್ದರೆ ವಾಟ್ಸಾಪ್‍ನಲ್ಲಿ ಮೆಸೇಜ್ ಬಿಟ್ಟಿರುತ್ತಾರೆ. ಆ ಸಂದೇಶ ನೋಡಿ ನಂತರ ಪ್ರತಿಕ್ರಿಯಿಸುವುದು, ಉತ್ತರಿಸುವುದು ಹೀಗೆ ನನ್ನ ಅವರ ಸಂಭಾಷಣೆ ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಆದರೆ ಈಗ ಕರೆ ಮಾಡುತ್ತಿದ್ದಾರೆ ಅಂದರೆ ಮುಖ್ಯವಾದದ್ದೇನೋ ಇದೆ ಎನಿಸಿ ತಕ್ಷಣ ಸ್ವೀಕರಿಸಿ “ನಮಸ್ತೆ ಸರ್” ಎಂದೆ. “ಹೇಗಿದ್ದೀಯೋ ಅವಿವೇಕಿ?” (ತುಂಬಾ ಪ್ರೀತಿಸುವ ಶಿಷ್ಯರಿಗೆ ಬಳಸುವ ಅಲಂಕಾರ ವಿಶೇಷಣ) ಕೇಳಿದರು ಮೇಷ್ಟ್ರು. “ಇದ್ದೀನಿ ಸಾರ್. ಹೇಳಿ...” ಕೇಳಿದೆ. “ಒಂದ್ ಕೆಲಸ ಕೊಡೋಣ ಅಂದ್ಕೊಂಡೆ ಕಣೊ” ಎಂದರು. ಕೆಲಸ ಸಿಕ್ಕ ದಿನವೇ ಕಲಾವಿದರ ಪಾಲಿಗೆ ಹಬ್ಬಹರಿದಿನ ಇತ್ಯಾದಿ. “ಕೊಡಿ ಸಾರ್ ಬಾಡಿಗೆ ಕಟ್ಟಿಲ್ಲ, ಲಾಟರಿ ಹೊಡಿತಿದ್ದೀನಿ” ಎಂದೆ. “ಬಿ.ಎಲ್ ವೇಣು ಗೊತ್ತ ನಿನಗೆ?” ಅಂತ ಕೇಳಿದ್ರು. “ಕೇಳಿದ್ದೀನಿ ಸಾರ್. ಅದೇ ಕಲ್ಲರಳಿ ಹೂವ್ವಾಗಿ ರೈಟ್ರು ತಾನೆ?” ಉತ್ತರಿಸಿದೆ. “ಕರೆಕ್ಟು. ಅವರ ಬಗ್ಗೆ ಚಲನಚಿತ್ರ ಅಕಾಡೆಮಿ ಬೆಳ್ಳಿಹೆಜ್ಜೆ ಮಾಡ್ತಿದೆ. ಇನ್ನೆರಡು ತಿಂಗಳು ಟೈಮಿದೆ. ಸೊ ಅವತ್ತು ಬೆಳ್ಳಿಹೆಜ್ಜೆ ದಿವಸ ತೋರಿಸೋಕೆ ಅವರ ಬಗ್ಗೆ ಒಂದು ಡಾಕ್ಯುಮೆಂಟರಿ ಬೇಕು. ಮಾಡು” ನೇರವಾಗಿ ಆಫರ್ ಕೊಟ್ಟರು. ಮಾಡಲ್ಲ, ನೋಡ್ತೀನಿ, ಟೈಮಿಲ್ಲ, ಥಿಂಕ್ ಮಾಡ್ಬೇಕು ಈ ಥರದ ಮಾತುಗಳು ನಾನು ಕೆಲಸದ ಬಗ್ಗೆ ಇದುವರೆಗೂ ಯಾರಿಗೂ ಹೇಳಿಲ್ಲ. ಕೆಲಸ ಮಾಡೋದೇ ನನಗೆ ತುಂಬಾ ಇಷ್ಟದ ಕೆಲಸ. ಹಾಗಾಗಿ ತಕ್ಷಣ ಒಪ್ಪಿಕೊಂಡೆ. ಫ್ರಾಂಕ್ಲಿ ಸ್ಪೀಕಿಂಗ್ ಒಪ್ಪಿಕೊಳ್ಳದೇ ನನಗೆ ಬೇರೆ ದಾರಿನೂ ಇರಲಿಲ್ಲ. ಮೊದಲನೆ ಕಾರಣ ಡಾಕ್ಯುಮೆಂಟರಿ ಮೇಕಿಂಗ್ ನನ್ನ ಅಚ್ಚುಮೆಚ್ಚಿನ ಕೆಲಸ ಮತ್ತು ಎರಡನೇದು ನನಗಾಗ ಹೇಳಿಕೊಳ್ಳುವಂಥ ಯಾವ ಪ್ರಾಜೆಕ್ಟು ಇರಲಿಲ್ಲ. ಆದರೆ ಕೆಲಸ ಮಾಡ್ತಿದ್ದೀವೊ ಇಲ್ವೊ ಹೊಟ್ಟೆ ಅಂತೂ ತನ್ನ ಪಾಡಿಗೆ ತಾನು ಹಸಿವಾಗ್ತಾನೇ ಇರುತ್ತೆ, ತಿಂಗಳಾದ್ರೆ ಓನರ್ ಮುದ್ದು ಮಾತುಗಳಲ್ಲೇ ಹೆದರಿಸುತ್ತಾ ಬಾಡಿಗೆ ಕೇಳೇ ಕೇಳ್ತಾನೆ. ಆಕಾಶವೇ ಬೀಳಲಿ ಮೇಲೆ ನಾ ನಿನ್ನ ಸಾಕೇ ಸಾಕ್ತೀನಿ ಅಂತ ಬಿಲ್ಡಪ್ ಕೊಟ್ಟು ಲವ್ ಮಾಡಿ, ಎರಡೂ ಕುಟುಂಬದವರ ಮುಂದೆ ಮೀಸೆ ತಿರುವಿ ನಮ್ ಲೈಫ್ ನಾವ್ ನೋಡ್ಕೋತೀವಿ ನೀವ್ ಟೆನ್ಷನ್ ಆಗ್ಬೇಡಿ ಅಂತ ದೊಡ್ಡ ದೊಡ್ಡ ಡೈಲಾಗ್ ಹೊಡೆದು ಮದ್ವೆ ಆಗಿರುವ ಮಡದಿಯನ್ನಂತೂ ಸಾಕಲೇ ಬೇಕು ಇಂಥ ಅನೇಕ ಸಾಮಾನ್ಯ ಭಾರತೀಯರ ಅಸಾಮಾನ್ಯ ಸಂಕಷ್ಟಗಳು ಒಟ್ಟಿಗೆ ನೆನಪಾಗಿ ತಕ್ಷಣ ಮೇಷ್ಟ್ರ ಆಹ್ವಾನಕ್ಕೆ ಒಪ್ಪಿಗೆ ತಿಳಿಸಿದೆ. “ಸರಿ ಅಕಾಡೆಮಿ ಅಧಿಕಾರಿ ಶಿವರಾಮಣ್ಣ ಅಂತ ಒಬ್ರು ನಂಬರ್ ಕಳಿಸ್ತೀನಿ. ಅವರ ಜೊತೆ ಉಳಿದಿದ್ದೆಲ್ಲಾ ಮಾತಾಡ್ಕೊ. ದುಡ್ಡು ನನ್ ಡಾಕ್ಯುಮೆಂಟರಿಗೆ ಕೊಟ್ಟಷ್ಟೇ ಕೊಡ್ತಾರೆ” ಎಂದರು. “ಒಕೆ ಸರ್” ಎಂದೆ. (ಕಳೆದ ವರ್ಷ ನಾಗ್ತಿಹಳ್ಳಿ ಮೇಷ್ಟ್ರ ಬಗ್ಗೆ ಇದೇ ಬೆಳ್ಳಿಹೆಜ್ಜೆ ಕಾರ್ಯಕ್ರಮಕ್ಕೆ ಡಾಕ್ಯುಮೆಂಟರಿ ಮಾಡಿಕೊಟ್ಟಿದ್ದೆ). “ವೇಣು ಅವರ ನಂಬರ್ ಶಿವರಾಮಣ್ಣ ಕೊಡ್ತಾರೆ. ನನಗೆ ವಿಪರೀತ ಕೆಲಸ ಇದೆ. ನಿನಗ್ ಸಿಗೋದು ಕಷ್ಟ ಆಗಬಹುದು. ಸೊ ಈ ಡಾಕ್ಯುಮೆಂಟರಿಗೆ ಸಂಬಂಧಪಟ್ಟ ಹಾಗೆ ಏನೇ ಇದ್ರೂ ನೀನು ಉಂಟು ಶಿವರಾಮಣ್ಣ ಉಂಟು. ಫೈನಲ್ ಆದ್ಮೇಲೆ ಒಂದ್ಸಲ ನನಗ್ ತೋರ್ಸು. ಏನಾದ್ರೂ ಸಣ್ಣಪುಟ್ಟ ಕರೆಕ್ಷನ್ ಇದ್ರೆ ಹೇಳ್ತೀನಿ. ಚೆನ್ನಾಗ್ ಮಾಡ್ಬೇಕು ಕಣೊ” ಮೇಷ್ಟ್ರು ಎಂದಿನಂತೆ ಕಳಕಳಿ ತುಂಬಿದ ಕಠೋರತೆಯಲ್ಲಿ ಹೇಳಿ ಕರೆ ಅಂತ್ಯಗೊಳಿಸಿದರು. ಸಹಜವಾದ ಖುಷಿಯಿಂದ ಸವಿತಾ ಕಡೆ ನೋಡಿದೆ. “ಏನು ವಿಷಯ?” ಎಂಬಂತೆ ಅವಳದ್ದೊಂದು ಲುಕ್ಕು. “ಹೊಸದೊಂದು ಡಾಕ್ಯುಮೆಂಟರಿ” ಮೌನದ ಪ್ರಶ್ನೆಗೆ ಉತ್ತರಿಸಿದೆ. ಅವಳಿಗೂ ಖುಷಿ. ಅಷ್ಟರಲ್ಲಿ ಫೋನ್‍ಗೊಂದು ಸಂದೇಶ ಬಂದ ಸದ್ದು. ನೋಡಿದೆ. ನಿರೀಕ್ಷಿಸಿದಂತೆ ಮೇಷ್ಟ್ರು ಶಿವರಾಮ್ ಅಂತ ಒಂದು ಕಾಂಟ್ಯಾಕ್ಟ್ ಕಳಿಸಿದ್ದರು. ಧನ್ಯವಾದದ ಜೊತೆಗೆ ನನ್ನ ಸಂಪೂರ್ಣ ಹೃದಯವನ್ನೇ ಮೇಷ್ಟ್ರಿಗೆ ಕಳಿಸಿದೆ ಎಮೋಜಿ ರೂಪದಲ್ಲಿ. ನಂತರ ಶಿವರಾಮ್ ಅವರಿಗೆ ಕರೆ ಮಾಡಿದೆ. ಕರೆ ಸ್ವೀಕರಿಸಿದ ಶಿವರಾಮಣ್ಣ ಅವರು “ಹಾ ಪರಮೇಶ್ವರ್ ನಾಗ್ತಿಹಳ್ಳಿ ಸಾರ್ ಹೇಳಿದಾರೆ ನೀವು ಒಳ್ಳೊಳ್ಳೆ ಡಾಕ್ಯುಮೆಂಟರಿ ಮಾಡಿದ್ದೀರ ಅಂತ. ಇದು ಚೆನ್ನಾಗ್ ಮಾಡ್ಕೊಡಬೇಕು” ಎಂದು ಏರು ಧ್ವನಿಯಲ್ಲಿ ಹೇಳಿದರು.“ಸರಿ ಸರ್” ಎಂದೆ. “10 ಗಂಟೆ ನಂತರ ಆಫೀಸಿಗೆ ಬಂದು ವರ್ಕ್ ಆರ್ಡರ್ ತಗೊಂಡ್‍ಬಿಡಿ” ಅಂದರು. “ಬರ್ತೀನಿ ಸರ್. ವೇಣು ಅವರ ನಂಬರ್ ಕಳಿಸ್ತೀರ ಪ್ಲೀಸ್” ಮನವಿ ಮಾಡಿದೆ. “ವಾಟ್ಸಾಪ್ ನಲ್ಲಿ ಹಾಯ್ ಹಾಕಿ ಕಳಿಸ್ತೀನಿ” ಎಂದರು. ಕರೆ ಅಂತ್ಯಗೊಂಡ ಬಳಿಕ ಅವರ ನಂಬರಿಗೆ ಹಾಯ್ ಕಳಿಸಿದೆ. ಬಿ.ಎಲ್ ವೇಣು ಅವರ ನಂಬರ್ ಕೆಲವೇ ಕ್ಷಣಗಳಲ್ಲಿ ಬಂತು. ಶಿವರಾಮ್ ಅವರಿಗೆ ಧನ್ಯವಾದ ತಿಳಿಸಿದೆ.

ವೇಣು ಅವರಿಗೆ ಕರೆ ಮಾಡುವ ಮೊದಲು ಅವರ ಬಗ್ಗೆ ಕೆಲವು ಬೇಸಿಕ್ ವಿಷಯಗಳನ್ನು ತಿಳಿದುಕೊಳ್ಳೋಣ ಎನಿಸಿ ಗೂಗಲ್ ನಲ್ಲಿ ಬಿ.ಎಲ್ ವೇಣು ಅಂತ ಟೈಪಿಸಿ ಎಂಟರ್ ಒತ್ತಿದೆ. ಕೆಲವು ಪುಟಗಳು ತೆರೆದುಕೊಂಡವು. ಸುಮಾರು ಅರ್ಧ ಗಂಟೆ ಕಾಲ ಗೂಗಲ್ ಜಾಲಾಡಿದ ನಂತರ “ಬಿ.ಎಲ್ ವೇಣು ಅಂದರೆ ಮೂಲತಃ ಚಿತ್ರದುರ್ಗದವರು. ಮೊದಲಿಗೆ ಕತೆ, ಕಾದಂಬರಿ ಬರೆಯುತ್ತಿದ್ದವರು ನಂತರದಲ್ಲಿ ಸಿನಿಮಾ ಲೇಖಕರಾದವರು. ಮೇರು ನಿರ್ದೇಶಕರಾದ ಸಿದ್ಧಲಿಂಗಯ್ಯ, ಪುಟ್ಟಣ್ಣ Pಣಗಾಲ್, ದೊರೆ-ಭಗವಾನ್, ಮೇರು ನಟರಾದ ವಿಷ್ಣುವರ್ಧನ್, ಅಂಬರೀಶ್, ಮೊದಲಾದ ಚಿತ್ರರಂಗದ ಘಟಾನುಘಟಿಗಳ ಸಿನಿಮಾಗಳಿಗೆ ಸಂಭಾಷಣೆಕಾರರಾಗಿ ಕೆಲಸ ಮಾಡಿದವರು. ಈಗ ಅವರು ದುರ್ಗದಲ್ಲೇ ನೆಲೆಸಿದ್ದಾರೆ. ಹಾಗಾಗಿ ಸಾಕ್ಷ್ಯಚಿತ್ರದ ಬಹುಪಾಲು ಭಾಗ ದುರ್ಗದಲ್ಲಿ ನಾವು ಶೂಟ್ ಮಾಡಬೇಕು” ನಾನು ಒಂದು ಪೇಪರ್ ಮೇಲೆ ಬರೆದುಕೊಂಡಿದ್ದಿಷ್ಟು. ಇಷ್ಟು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ ನಂತರ ವೇಣು ಅವರಿಗೆ ಕರೆ ಮಾಡಬಹುದು ಎಂದು ನಿರ್ಧರಿಸಿ ಕರೆ ಮಾಡಿದೆ. ನಾಲ್ಕೈದು ರಿಂಗ್ ಆದ ನಂತರ ಸ್ವೀಕರಿಸಿದರು. ನಾನು ನನ್ನ ಪರಿಚಯ ಮಾಡಿಕೊಂಡು ವಿಷಯ ತಿಳಿಸಿದೆ. “ನಾಗತಿಹಳ್ಳಿ ಚಂದ್ರಶೇಖರ್ ಅವರು ಫೋನ್ ಮಾಡಿದ್ರು ರೀ. ವಿಷಯ ಹೇಳಿದ್ರು. ಈಗ ಹೇಗ್ ಮಾಡ್ತೀರ? ಅಂದ್ರೆ ಹೇಗ್ ಶುರು ಮಾಡ್ತೀರ? ಅಂತ ಕೇಳಿದೆ” ಎಂದರು. ಅಲ್ಲಿಯವರೆಗೂ ನಾವು ಮಾಡಿದ್ದ 7-8 ಸಾಕ್ಷ್ಯಚಿತ್ರಗಳ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ ಈ ರೀತಿಯ ವ್ಯಕ್ತಿಚಿತ್ರಗಳನ್ನು ಮಾಡುವ ಮೊದಲು ಆಯಾ ವ್ಯಕ್ತಿಗಳ ಕುರಿತು ಸಂಪೂರ್ಣ ರಿಸರ್ಚ್ ಮಾಡಿಕೊಳ್ಳಬೇಕು. ಅವರ ಬಗ್ಗೆ ಬಂದಿರುವ ಆತ್ಮಕತೆ, ಅಭಿನಂದನಾ ಗ್ರಂಥ, ಲೇಖನಗಳು, ಸಾಕ್ಷ್ಯಚಿತ್ರಗಳು ಇವೆಲ್ಲವನ್ನೂ ಓದಿ, ನೋಡಿ, ನೋಟ್ಸ್ ಮಾಡಿಕೊಂಡು ಅವರ ಬದುಕಿನ ಬಗ್ಗೆ, ವ್ಯಕ್ತಿತ್ವ, ವ್ಯಕ್ತಿ ವಿಶಿಷ್ಠತೆಗಳ ಬಗ್ಗೆ ನಾವು ಮೊದಲು ಸಂಪೂರ್ಣವಾಗಿ ಅರಿತುಕೊಳ್ಳಬೇಕು. ಆ ನಂತರವಷ್ಟೇ ಸಾಕ್ಷ್ಯಚಿತ್ರದ ಸ್ಕ್ರಿಪ್ಟ್, ಶೂಟಿಂಗ್ ಇತ್ಯಾದಿ ಮಾಡಲು ಸಾಧ್ಯ.. ಇದೇ ವಿಷಯವನ್ನ ವೇಣು ಸರ್ ಅವರಿಗೆ ತಿಳಿಸಿದೆ. “ಹೌದಾ? ಅದಿನ್ನೂ ಒಳ್ಳೇದೇ! ನನ್ ಭೇಟಿ ಮಾಡೋಕ್ ಮೊದಲು ಹಾಗಾದ್ರೆ ನನ್ನದೊಂದು ಆತ್ಮಕತೆ ಇದೆ. ಅದನ್ನ ಓದ್ಬಿಡಿ. ನಿಮಗೆ ಹೆಚ್ಚು ಕಡಿಮೆ ಎಲ್ಲ ವಿಷಯ ಸಿಕ್ಕಿಬಿಡುತ್ತೆ” ಎಂದರು. ಖಂಡಿತಾ ಓದ್ತೇವೆ ಸರ್. ಹೆಸರೇನು? ಎಲ್ಲಿ ಸಿಗುತ್ತೆ?” ಕೇಳಿದೆ. “ಲೋಕದಲ್ಲಿ ಜನಿಸಿದಾ ಬಳಿಕ...” ಅಂತ ನನ್ ಆಟೋಬಯೋಗ್ರಫಿ ಹೆಸರು. ಗೀತಾಂಜಲಿ ಪಬ್ಲಿಕೇಷನ್ಸ್ ಅಂತ ಬೆಂಗಳೂರಿನವರೇ ಪಬ್ಲಿಷರ್ರು. ನಿಮಗೆ ನಂಬರ್ ಕಳಿಸ್ತೀನಿ. ಒಂದು ಕಾಪಿ ತಗೊಳಿ” ವೇಣು ಸರ್ ತಿಳಿಸಿದರು. “ಸರಿ ಸರ್ ಇವತ್ತೇ ತಗೊಳ್ತೇನೆ. ನಂಬರ್ ಕಳಿಸಿ ಪ್ಲೀಸ್” ಕರೆ ಅಂತ್ಯವಾಯಿತು.


ಸ್ವಲ್ಪ ಸಮಯದಲ್ಲೇ ವೇಣು ಸರ್ ಅವರ ನಂಬರಿನಿಂದ ಗೀತಾಂಜಲಿ ಪಬ್ಲಿಕೇಷನ್ ನಂಬರ್ ಟೆಕ್ಸ್ಟ್ ಎಸ್‍ಎಂಎಸ್ ಬಂತು. ಕರೆ ಮಾಡಿದೆ. ಆದರೆ ಎರಡು ಬಾರಿ ಕರೆ ಮಾಡಿದರೂ ಯಾರೂ ಸ್ವೀಕರಿಸಲಿಲ್ಲ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಕಾಲ್ ಮಾಡೋಣ ಅಂದುಕೊಂಡು ಹೆಂಡತಿಯ ಆಜ್ಞಾನುಸಾರ ಮನೆ ಕಸ ಗುಡಿಸತೊಡಗಿದ್ದೆ. ಅರ್ಧಂಬರ್ಧ ಗುಡಿಸಿರಬಹುದು ಫೋನ್ ರಿಂಗಣ. ಅಫ್‍ಕೋರ್ಸ್ ಗೀತಾಂಜಲಿ ಪಬ್ಲಿಕೇಷನ್ಸ್ ಕರೆ ಅದು. ಸ್ವೀಕರಿಸಿ “ವೇಣು ಅವರ ಆತ್ಮಕತೆ ಪುಸ್ತಕದ ಒಂದು ಕಾಪಿ ಬೇಕು ಅವರ ಡಾಕ್ಯುಮೆಂಟರಿ ಮಾಡೋದಕ್ಕೆ” ವಿಷಯ ತಿಳಿಸಿದೆ. “ಆ ಪುಸ್ತಕ ಅಂಗಡಿಗಳಲ್ಲಿ ಸಿಕ್ತಿಲ್ಲ. ಒಂದ್ಕೆಲಸ ಮಾಡಿ ನಿಮ್ ಪೋಸ್ಟಲ್ ಅಡ್ರೆಸ್ ಕಳಿಸಿ. ಕೊರಿಯರ್ ಮಾಡ್ತೀವಿ” ಉತ್ತರ ಬಂತು. ಅಡ್ರೆಸ್ ಕಳಿಸಿದೆ. ಜೊತೆಗೆ 500 ರೂಪಾಯಿ ಹಣವನ್ನ ಅವರು ಕಳಿಸಿದ್ದ ಖಾತೆಗೆ ವರ್ಗಾಯಿಸಿದೆ. ಆದರೆ ಅಲ್ಲಿಂದ ಮೂರ್ನಾಲ್ಕು ದಿನಗಳಾದರೂ ಪುಸ್ತಕ ಬರಲಿಲ್ಲ. ಕೊರಿಯರ್ ಹಾಕಿದ್ದರೆ ಮರುದಿನವೇ ಬರಬೇಕಲ್ಲ ಎಂದುಕೊಂಡು ಮತ್ತೆ ಗೀತಾಂಜಲಿಯವರಿಗೆ ಕರೆ ಮಾಡಿ ಕೇಳಿದಾಗ “ಅವತ್ತೇ ಕೊರಿಯರ್ ಹಾಕ್ಬಿಟ್ಟಿದ್ದೇವೆ” ಎಂದರು. ಕೊರಿಯರ್ ಬಿಲ್ ವಾಟ್ಸಾಪ್ ಮಾಡಲು ಕೇಳಿದೆ. ಕಳಿಸ್ತೇವೆ ಎಂದರು. ಕಳಿಸಿದರು. ಕೊರಿಯರ್ ಸ್ಟೇಟಸ್ ಚೆಕ್ ಮಾಡುವ ಮೊದಲು ಇರಲಿ ಒಮ್ಮೆ ನೋಡುವ ಅಂತ ಹೇಳಿ ಮನೆ ಹೊರಗಿನ ಸಂಧಿಗೊಂದಿಗಳಲ್ಲಿ ಹುಡುಕುತ್ತಿದ್ದಾಗ ತೆರೆದಿದ್ದ ಕಿಟಕಿಯ ಹಿಂದಿನ ಸಂಧಿಯಲ್ಲಿ ಒಂದು ಪಾರ್ಸೆಲ್ ಬಿದ್ದಿತ್ತು. ತೆಗೆದು ನೋಡಿದರೆ “ಲೋಕದಲ್ಲಿ ಜನಿಸಿದಾ ಬಳಿಕ” ಬೃಹತ್ ಗಾತ್ರದ ಪುಸ್ತಕ ಒಳಗಿತ್ತು. ಏನಾಗಿರಬಹುದು? ಊಹಿಸಿದೆ, “ನಮ್ಮನೆ ಬೆಕ್ಕು “ಸಿಬೇಶ” ಓಡಾಡಿಕೊಂಡಿರಲಿ ಅಂತ ಒಂದು ಕಿಟಕಿ ಸದಾ ಓಪನ್ನೇ ಇಟ್ಟಿರುತ್ತೇವೆ. ಕೊರಿಯರ್‍ನವರು ನಾವು ಮನೆಲಿಲ್ಲದ ಸಂದರ್ಭದಲ್ಲಿ ಬಂದು ಆ ಪ್ಯಾಕೆಟ್ ತೆರೆದಿದ್ದ ಕಿಟಕಿಯ ಬಳಿ ಇಟ್ಟಿರಬಹುದು. ಈ ನಮ್ ಸಿಬೇಶ ಕಿಟಕಿಯಲ್ಲಿ ಹಾರಿ ಹಾರಿ ಬಂದು ಹೋಗಿ ಮಾಡುವ ಯಾವುದೋ ಸಂದರ್ಭದಲ್ಲಿ ಈ ಪಾರ್ಸೆಲ್ ಕೆಳಗೆ ಬೀಳಿಸಿರಬಹುದು” ಹೀಗೆ ಪುಸ್ತಕ ನನ್ನ ಕೈ ಸೇರಲು ತಡವಾದ ಕಾರಣದ ಹಿಂದೆ ನಡೆದಿರಬಹುದಾದ ಘಟನೆಗಳ ಸರಮಾಲೆಯನ್ನು ಸೃಷ್ಟಿಸಿಕೊಂಡೆ. ಸುಮಾರು 700 ಪುಟಗಳ ಪುಸ್ತಕ ಕೈಯಲ್ಲಿತ್ತು. ನನ್ನಂಥ ಶ್ರೀ ಸಾಮಾನ್ಯನಿಂದ ಅಷ್ಟು ಬೃಹತ್ ಪುಸ್ತಕ ಓದಿ, ನೋಟ್ಸ್ ಮಾಡಲು ಸಾಧ್ಯವೇ ಇಲ್ಲ ಎಂಬುದನ್ನು ಮನಗಂಡು ಸ್ತ್ರೀ ಸಾಮಾನ್ಯಳಾದ ನನ್ನ ಹೆಂಡತಿಗೆ ವೇಣು ಅವರ ಆತ್ಮಕತೆ ವರ್ಗಾಯಿಸಿ “ಇನ್ನು ನಿನ್ನ ಕೆಲಸ” ಎಂದು ನಿರಾಳನಾದೆ (ನಾನು ಮಾಡಿರುವ ಎಲ್ಲಾ ಸಾಕ್ಷ್ಯಚಿತ್ರಗಳ ರಿಸರ್ಚ್ ವರ್ಕ್ ಮಾಡಿದ್ದು ಅವಳೇ). ಸವಿ ನಿಂದು ಯಾವಾಗ್ಲೂ ಇದ್ದಿದ್ದೇ ಎಂಬಂತೆ ತೀಕ್ಷ್ಣ ನೋಟ ಬೀರಿದಳು.156 views