EP10: ಫಸ್ಟ್ ಪಿಚ್ಚರೇ ಅಟ್ಟರ್ ಫ್ಲಾಪು! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ

Updated: Jan 24, 2021

“ಸರ್ ಇಲ್ಲಿ ಒಂದು ಕ್ಲಾರಿಟಿ ಬೇಕು. ಹಾಗಾದ್ರೆ ಮೊದಲು ಥಿಯೇಟರ್‍ನಲ್ಲಿ ರಿಲೀಸ್ ಆದ ನಿಮ್ಮ ಫಸ್ಟ್ ಪಿಕ್ಚರ್ ಯಾವ್ದು?” ನಾನು ಮಧ್ಯ ಪ್ರವೇಶಿಸಿ ಕೇಳಿದೆ. ವೇಣು ಸರ್ ನಗುತ್ತಾ “ಅದು ಹೇಳ್ಲಿಲ್ಲ ಅಲ್ವ. “ದೊಡ್ಡಮನೆ ಎಸ್ಟೇಟ್” ಅಂತ. ನಂದೇ ಒಂದ್ ಕತೆ ದೊಡ್ಡಮನೆ ಅಂತ. ಅದನ್ನ ಸಿ. ಚಂದ್ರಶೇಖರ್ ಅಂತ ‘ಹುಲಿ ಬಂತು ಹುಲಿ’ ಅಂತ ಸಿನಿಮಾ ಮಾಡಿ ಅವಾರ್ಡ್ ತಗೊಂಡ್‍ಬಿಟ್ಟಿದ್ರು, ಅವರು ನನ್ನ ಆ ಕತೆನ ಸಿನಿಮಾ ಮಾಡ್ತೀನಿ ಅಂತ ತಗೊಂಡು ಮಾಡಿದ್ರು. ಸಾವಿರ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ರು. ಸರಿ ಇಲ್ಲೇ ಚಿಕ್ಕಮಗಳೂರಿನಲ್ಲಿ ಮುಹೂರ್ತ ಇಟ್ಕೊಂಡಿದ್ರು. ಹೋದ್ವಿ ನಾನು ನನ್ ಫ್ರೆಂಡು ಶಾಂತರಾಜು ಅಂತ. ಅಲ್ ಹೋದ್ರೆ ಆ ಡೈರೆಕ್ಟ್ರುಗೆ ನನ್ ಹತ್ರ ಮಾತಾಡಕ್ ಹೆಸಿಟೇಷನ್ನು. ನಾನು ಪಕ್ಕದಲ್ಲಿ ಹೋಗ್ ಕೂತ್ಕೊಂಡ್ರೆ ಎದ್ ಹೋಗಿ ದೂರ ಕೂತ್ಕೊತಿದ್ರು!

“ಸಾರ್ ನನ್ ಚಿತ್ರಕತೆ?” ಅಂದರೆ “ಚಿತ್ರಕತೆ ಬದನೆಕಾಯಿ ನಿನಗೇನ್ ಗೊತ್ತು? ಏನೋ ಮಾಡಿದ್ದೀನಿ” ಅಂತ ಅನ್ನೋರು. ಬಹಳ ವಿಚಿತ್ರವಾಗ್ ಬಿಹೇವ್ ಮಾಡಿದ್ರು. ಅಷ್ಟ್ರಲ್ಲಿ ಮಾನು ಮತ್ತೆ ಪ್ರಮಿಳಾ ಜೋಷಾಯಿ ಬಂದ್ರು. ಅವರು ನನಗೆ ಮೊದ್ಲಿಂದ ಪರಿಚಯ. ಅವರೇ ಆ ಪಿಚ್ಚರ್ ಹೀರೋ ಹೀರೋಯಿನ್. ಅವರು ನನ್ನನ್ನ ತುಂಬಾ ಪ್ರೀತಿಯಿಂದ ಕಂಡರು. ಸರಿ ತುಂಬಾ ಮನಸ್ಸಿಗೆ ಬೇಜಾರು ಆಯ್ತು ಈ ತರ ಕೆಟ್ಟದಾಗ್ ನೋಡಿದ್ರಲ್ಲ ಅಂತ. ಅಲ್ಲಿಂದ ಹೊರಟು ಬಂದ್ವಿ. ಬಿಡಿ ಆಮೇಲ್ ಅವರು ಅದಕ್ಕೆ ಅನುಭವಿಸಿದ್ರು. ಮುಂದೆ ಒಂದ್ಸಲ ಒಂದು ಫಂಕ್ಷನ್‍ನಲ್ಲಿ ಅವರು ಕೂತಿದ್ರೆ “ಏಯ್ ಎದ್ದೇಳ್ರಿ ವೇಣು ಅವರು ಬಂದಿದಾರೆ” ಅಂತ ಹೇಳಿ ಅವರನ್ನ ಎಬ್ಬಿಸಿ ನನ್ನನ್ನ ಅದೇ ಚೇರಲ್ಲಿ ಕೂರಿಸಿದ್ರು. ಸಿನಿಮಾದಲ್ಲಿ ನೋಡಿ ಹೇಗಿರುತ್ತೆ? ಸಂದರ್ಭ ಒಂದೇ ತರ ಇರೋದಿಲ್ಲ ಬದಲಾಗುತ್ತೆ ಅನ್ನೋದಕ್ಕೆ ಈ ಘಟನೇನೇ ಸಾಕ್ಷಿ. ಆ ದೊಡ್ಡಮನೆ ಸಿನಿಮಾ ರಿಲೀಸ್ ಆಯ್ತು. ಶಿವಮೊಗ್ಗದಲ್ಲಿ ರಿಲೀಸ್ ಆಗಿತ್ತು. ಹೋಗಿ ನೋಡಿದ್ವಿ ನಾನು ನನ್ ಫ್ರೆಂಡು ಶಾಂತರಾಜು. ತುಂಬಾ ಗಬ್ಬಾಗಿತ್ತು ಸಿನಿಮಾ. ಸದ್ಯ ನಮ್ಮೂರಿಗ್ ಬರದೇ ಇದ್ರೆ ಸಾಕಪ್ಪ ಅಂದ್ಕೊತಿದ್ರೆ ಬಂದೇ ಬಿಡ್ತು! ಆದರೂ ಇಲ್ಲೂ ಎರಡು ವಾರ ಓಡ್ತು. ಎರಡು ವಾರ ಓಡಿದ್ರೂ ಆಗ ಅದು ಫ್ಲಾಪ್ ಸಿನಿಮಾನೇ. ಈಗ ಅಮೋಘ ಹತ್ತನೇ ದಿನ ಅಂತ ಹಾಕ್ತಾರೆ. ಸರಿ ಹಿಂಗೆ ನನ್ ಫಸ್ಟ್ ಪಿಚ್ಚರೇ ಅಟ್ಟರ್ ಫ್ಲಾಪು! ಶ್ ಅಂತ ಸಿನಿಮಾ ಬಂತಲ್ಲ ಉಪೇಂದ್ರ ಅವರ್ದು, ಸೇಮ್ ಅದೇ ತರ ಕತೆ ಅದು. ಆ ಕತೇನ ಏನೇನೊ ಮಾಡಿ ಹಾಳ್ ಮಾಡ್‍ಬಿಟ್ಟಿದ್ರು. ಇದು ನನ್ನನ ಮೊದಲ ಸಿನಿಮಾ ಎಂಟ್ರಿಯ ಅನುಭವ. ಅಂದ್ರೆ ಯಾಕ್ ಹೇಳ್ದೆ ಅಂದ್ರೆ ಇವತ್ತು ವೇಣು ತುಂಬಾ ಸಕ್ಸಸ್‍ಫುಲ್ ರೈಟ್ರು ಸಿನಿಮಾದಲ್ಲಿ ಕೂಡ ಅಂತಾರೆ. ಆದರೆ ಆವತ್ತು ಮೊದಲನೇ ಸಲ ಕಾಲಿಟ್ಟಾಗ ನೋವು, ಹಿಂಸೆ, ಅವಮಾನ, ಸೋಲು ಅನುಭವಿಸಿದ್ದೀನಿ. ಅದನ್ನೂ ಗಮನಕ್ಕೆ ತಗೊಂಡಾಗ ಇವತ್ತಿನ ನನ್ನ ಗೆಲುವು ಸಲೀಸಾಗ್ ಸಿಕ್ಕಿದ್ದಲ್ಲ ಅಂತ ಗೊತ್ತಾಗುತ್ತೆ” ಮುತ್ತಿನಂಥ ಮಾತಿನೊಂದಿಗೆ ಮತ್ತೊಮ್ಮೆ ಮೌನಕ್ಕೆ ಶರಣಾದರೂ ವೇಣು ಸರ್. “ಮುಂದೆ ಸರ್?” ಪುಟ್ಟ ಕೆಣಕುವಿಕೆ ನನ್ನ ಕಡೆಯಿಂದ. “ಮುಂದೆ, ವೇಣು ಅವರು ತಮ್ಮ ಕತೆಗಳು ಸಿನಿಮಾ ಆದರೆ ಅದಕ್ಕೆ ಡೈಲಾಗ್ ಬರೀತಾರೆ. ಬೇರೆಯವರ ಕತೆಗಳಿಗೆ ಡೈಲಾಗ್ ಡೈಲಾಗ್ ಬರಿತಾರ? ಅನ್ನೊ ಒಂದು ಮಾತು ಸ್ಟಾರ್ಟ್ ಆಯ್ತು. ಆಗ ಮೊದಲು ನನ್ನದಲ್ಲದ ಕತೆಗೆ ಡೈಲಾಗ್ ಬರೆದ ಸಿನಿಮಾ “ರಾಜ ಮಹಾರಾಜ” ಅಂತ. ಆರತಿ, ಆಶೋಕ್ ಲೀಡ್. ಅಲ್ಲಿಗೆ “ಓ ವೇಣು ಅವರು ಬೇರೆಯವರ ಕತೆಗಳು ಸಿನಿಮಾ ಆದ್ರೂ ಡೈಲಾಗ್ ಬರಿತಾರೆ” ಅಂತ ಸುದ್ದಿ ಆಯ್ತು. ಅಷ್ಟೊತ್ತಿಗೆ ನನ್ನ ಕಾದಂಬರಿ “ಪ್ರೇಮಪರ್ವ” ಸಿದ್ಧಲಿಂಗಯ್ಯನೋರು ಸಿನಿಮಾ ಮಾಡಿ ಅದು ಕೂಡ ದೊಡ್ಡ ಹಿಟ್ ಆಗ್‍ಬಿಟ್ಟಿತ್ತು. ಭವ್ಯ, ಮುರಳಿ ಇಂಟ್ರಡಕ್ಷನ್ ಆದ ಸಿನಿಮಾ ಅದು. ಚರಣ್‍ರಾಜ್, ದೊಡ್ಡಣ್ಣ ಕೂಡ ಇದ್ರು ಅದ್ರಲ್ಲಿ. ಸರಿ ಆಮೇಲೆ ದೊಡ್ಡಣ್ಣ ಒಂದು ಸಿನಿಮಾ ಮಾಡಬೇಕು ಅಂತ ಅಂದ್ಕೊಂಡಿದ್ರು. ಅಪರಂಜಿ ಅಂತ ಸಿನಿಮಾ ಅದು. ಆ ಸಿನಿಮಾಗೆ ವೇಣು ಡೈಲಾಗ್ ಬರಿಬೇಕು ಅಂತ ಹೇಳಿ ರಿಕ್ವೆಸ್ಟ್ ಮಾಡಿದ್ರು. “ದುಡ್ಡು ಪಡ್ಡು ಕೊಡಕಾಗಲ್ಲಪ್ಪ. ಬರಿಬೇಕು” ಅಂದ್ರು. ರವೀಂದ್ರನಾಥ್ ಅಂತ ಡೈರೆಕ್ಟ್ರು ಮದ್ರಾಸ್‍ನಲ್ಲಿ ರಜನೀಕಾಂತ್ ಕ್ಲಾಸ್‍ಮೇಟ್ ಆಗಿದ್ದವರು. ರಜನಿಕಾಂತ್ ಎಷ್ಟ್ ದೊಡ್ ಮನುಷ್ಯ ಅಂದ್ರೆ ಸ್ನೇಹಕ್ಕೆ ಬೆಲೆಕೊಟ್ಟು ಆ ಸಿನಿಮಾದಲ್ಲಿ ಗೆಸ್ಟ್ ರೋಲ್ ಮಾಡಿದ್ರು. ನಾನು ಆ ಸಿನಿಮಾಗೆ ಸ್ಕ್ರೀನ್‍ಪ್ಲೇ, ಡೈಲಾಗ್ಸ್ ಮಾಡಿಕೊಟ್ಟೆ. ಅದೂ ಚೆನ್ನಾಗ್ ಆಯ್ತು ಸಿನಿಮಾ.


584 views