EP2: ರಿಸರ್ಚು ವರ್ಕು ಮತ್ತು ರಿಸರ್ಚರ್ ಎಕ್ಸೈಟ್‍ಮೆಂಟು! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ

Updated: Jan 24, 2021

“ವಾವ್ ರೀ ಇಲ್ಲಿ ಕೇಳ್ರಿ!” ಸವಿ ನೋಟ್ಸ್ ಮಾಡಲು ಶುರು ಮಾಡಿ ಸ್ವಲ್ಪ ಹೊತ್ತಾಗಿತ್ತು ಎಕ್ಸೈಟೆಡ್ ಟೋನ್‍ನಲ್ಲಿ ಕರೆದಳು. “ಏನು? ಕೇಳಿದೆ. “ವೇಣು ಅವರ ಅಪ್ಪ ಕೂಡ ನಾಟಕದವರಂತೆ. ಅವರ ತಂದೆ ಮಾಸ್ಟರ್ ಹಿರಣಯ್ಯ ಅವರ ತಂದೆ ಕಂಪನೀಲಿ ಆರ್ಟಿಸ್ಟ್ ಆಗಿದ್ರಂತೆ” ಅದೇ ಎಕ್ಸೈಟ್‍ಮೆಂಟ್‍ನಲ್ಲಿ ಹೇಳಿದಳು. “ಓ” ಪ್ರತಿಕ್ರಿಯಿಸಿದೆ. ನಾನಿಬ್ಬರೂ ಮೂಲತಃ ರಂಗಭೂಮಿಯಿಂದ ಬಂದವರಾದ್ದರಿಂದ ಯಾರಾದರೂ ನಾಟಕದವರು ಅಂದ ಕೂಡಲೇ ನಮ್ಮ ಕಿವಿಗಳು ನೆಟ್ಟಗಾಗುತ್ತವೆ, ಇದ್ದಕ್ಕಿದ್ದಂತೆ ಒಂದು ಅವ್ಯಕ್ತ ಆತ್ಮೀಯತೆ, ಒಲವು ಮನಸ್ಸಿನೊಳಗೆ ಸೃಷ್ಟಿಯಾಗುತ್ತದೆ. ನಮ್ಮದೊಂದು ರೀತಿ ಮೂಲ-ವ್ಯಾಧಿ ಅಂತಲೂ ನೀವು ಅಂದುಕೊಳ್ಳಬಹುದು. ಬೇರೆ ಯಾವುದೊ ರಾಜ್ಯದಲ್ಲೊ, ದೇಶದಲ್ಲೊ ಅನಾಮಿಕರಾಗಿ, ಅನಾಥರಂತೆ ಅಲೆಯುತ್ತಿರುವಾಗ ಇದ್ದಕ್ಕಿದ್ದಂತೆ ಕನ್ನಡ ಕಿವಿಗೆ ಬಿದ್ದ ಕೂಡಲೇ ಜಾಗೃತರಾಗಿ ಕಣ್ಣರಳಿಸುತ್ತೇವಲ್ಲ ಹಾಗೆ ಇದು ಕೂಡ. ರಂಗಭೂಮಿಯ ಮೂಲದವರು ಎಂದು ತಿಳಿದಾಗ ನಮಗೊಂದು ರೀತಿ ಅವ್ಯಕ್ತ ಆನಂದÀ. ಸೊ ವೇಣು ಅವರ ತಂದೆ ರಂಗಭೂಮಿಯವರು ಅಂತ ಗೊತ್ತಾದ ಕೂಡಲೇ ಒಳಗೊಳಗೆ ಖುಷಿಯಾಗಿ ನಮ್ಮ ಆಪ್ತರು ಎಂಬ ಭಾವ ಮೂಡಿದ್ದು ಸುಳ್ಳಲ್ಲ. ಸವಿತಾ ನೋಟ್ಸ್ ಮಾಡುವ ತನ್ನ ಕೆಲಸ ಮುಂದುವರೆಸಿದಳು. ಜೊತೆಗೆ ಆಗಾಗ ಆತ್ಮಕತೆಯಲ್ಲಿ ಓದಿದ ಬೆರಗುಗೊಳಿಸುವ ಅಂಶಗಳ ಬಗ್ಗೆ ಕರೆದು ಕರೆದು ಹೇಳುವುದನ್ನೂ ಮುಂದುವರೆಸಿದಳು. “ಇಲ್ಲಿ ನೋಡ್ರಿ ಒಂದು ಹೊತ್ತು ಊಟಕ್ಕೂ ಇಲ್ದೆ ಬರೀ ಕಾಫಿ ಕುಡ್ಕೊಂಡ್ ಬದುಕಿದ್ರಂತೆ! ಛೇ ಅವರಪ್ಪ ನೋಡ್ರಿ ಎಂಥ ಮೋಸ ಮಾಡಿದ್ರು! ರೀ ಇಲ್ ಕೇಳ್ರಿ ವೇಣು ಅವರ್ ಲವ್ವರ್ ಬಗ್ಗೆ ಎಲ್ಲಾ ಬರೆದು ಬಿಟ್ಟಿದಾರೆ! ಪುಟ್ಟಣ್ಣ Pಣಗಾಲ್ ವೇಣು ಅವರ ಎದುರಿಗೆ ಅತ್ತುಬಿಟ್ಟಿದ್ರಂತೆÉ! ವಿಷ್ಣುವರ್ಧನ್ ಕೆಲಸ ಬಿಟ್ಟುಬಿಡಿ ಮನೆ ಮಾಡಿಕೊಡ್ತೀನಿ ಅಂದಿದ್ರಂತೆ! ಅಂಬರೀಶ್ ಕುಡೀತಾ ಕತೆ ಕೇಳಿದ್ರಂತೆ! ಬರೀ ವೀಕೆಂಡ್ ಮಾತ್ರ ಬೆಂಗಳೂರಿಗೆ ಬಂದು ಬರೆದು ಕೊಟ್ಟು ಹೋಗ್ತಿದ್ರಂತೆ! ಶಂಕರ್‍ನಾಗ್ ಸಿನಿಮಾಗಳಿಗೂ ಬರೆದಿದ್ದಾರಲ್ರಿ! ಮದಕರಿ ನಾಯಕ ಬರೆದಾಗ ಮನೆಗೆ ನುಗ್ಗಿ ಹೊಡೆಯೋಕೆ ಒಂದು ಗುಂಪು ರೌಡಿಗಳು ಬಂದಿದ್ರಂತೆ! ಅವಳ ಎಕ್ಸೈಟ್‍ಮೆಂಟ್ ಹೆಚ್ಚಾಗುತ್ತಿತ್ತೇ ವಿನಃ ಕಡಿಮೆಯಾಗಲಿಲ್ಲ. ಅಂತೂ ಸವಿತಾ ಮೂರ್ನಾಲ್ಕು ದಿನಗಳೊಳಗೆ “ಲೋಕದಲ್ಲಿ ಜನಿಸದಾ ಬಳಿಕ” ಆತ್ಮಕತೆ ಓದಿ ಅಚ್ಚುಕಟ್ಟಾದ ನೋಟ್ಸ್ ಮಾಡಿ ಕೈಗಿಟ್ಟಳು. ಈ ರೀತಿ ನೋಟ್ಸ್ ಮಾಡುಕೊಳ್ಳುತ್ತಿದ್ದ ಸಂದರ್ಭದಲ್ಲಿ ನಾವು ಮಾಡಿಕೊಂಡ ಇನ್ನೊಂದು ಮುಖ್ಯವಾದ ಕೆಲಸ ಅಂದರೆ ಆತ್ಮಕತೆಯಲ್ಲಿ ಅಲ್ಲಲ್ಲಿ ಪ್ರಸ್ತಾಪವಾಗುವ ವ್ಯಕ್ತಿಗಳ ಹೆಸರುಗಳನ್ನು ಒಂದು ಕಡೆ ಬರೆದುಕೊಂಡಿದ್ದು. ಏಕೆಂದರೆ ವೇಣು ಅವರ ಬದುಕಿನ ಹಲವು ಹಂತಗಳಲ್ಲಿ ಜೊತೆಯಾಗಿ ಅವರ ಬದುಕನ್ನು ಹತ್ತಿರದಿಂದ ಕಂಡಿರುವವರ ಸಂದರ್ಶನಗಳು ಸಾಕ್ಷ್ಯಚಿತ್ರಕ್ಕಾಗಿ ನಮಗೆ ಬೇಕಿದ್ದವು. ಸುಮಾರು 22 ಜನರ ಪಟ್ಟಿ ಸಿದ್ಧವಾಗಿತ್ತು. ಮೊದಲ ಹಂತದ ತಯಾರಿ ಹಾಗೆ ಮುಗಿದಿತ್ತು. ಮುಂದಿನ ಕೆಲಸವೇ ಹೋಗಿ ವೇಣು ಅವರ ಮುಂದೆ ಪಟ್ಟಾಗಿ ಕೂತು ನಾವು ಮಾಡಿಕೊಂಡಿರುವ ನೋಟ್ಸ್ ತೋರಿಸಿ, ಚರ್ಚಿಸಿ ಮತ್ತಷ್ಟು ಕ್ಲಾರಿಟಿ ಪಡೆದುಕೊಳ್ಳುವುದಾಗಿತ್ತು. ಶೂಟಿಂಗ್ ಇತ್ಯಾದಿ ಮುಂದುವರೆಯುವ ಮೊದಲು ಒಬ್ಬ ಡಾಕ್ಯುಮೆಂಟರಿ ಮೇಕರ್‍ಗೆ ಸಬ್ಜೆಕ್ಟ್ ಬಗ್ಗೆ ಕ್ಲಾರಿಟಿ ಇಟ್ಟಕೊಳ್ಳುವುದು ತುಂಬಾ ಮುಖ್ಯ. ಇಲ್ಲದಿದ್ದರೆ ಸಂತೆಗೆ ಮೂರು ಮೊಳ ನೇಯ್ದು ಕೊಡೋದು ಅಂತಾರಲ್ಲ ಹಾಗಾಗುತ್ತೆ ಪ್ರಾಜೆಕ್ಟು. ಆ ರೀತಿ ಏನೂ ಹಿಂದೆ ಮುಂದೆ ಗೊತ್ತಿಲ್ಲದೆ ಸುತ್ತಿ ಕೊಟ್ಟು ನನಗೂ ನಮ್ಮ ತಂಡಕ್ಕೂ ಅಭ್ಯಾಸವಿಲ್ಲದ್ದ ಕಾರಣ ಇಷ್ಟೆಲ್ಲಾ ಶ್ರಮ ಅಗತ್ಯವಿತ್ತು. ಅಂಡ್ ಮೋರ್ ಓವರ್ ಇಷ್ಟು ಪ್ರಿಪರೇಷನ್ ಇದ್ದಾಗ ಮಾಡುವ ಪ್ರಾಜೆಕ್ಟ್‍ನ ಕ್ವಾಲಿಟಿ ಬೇರೆ ಲೆವೆಲ್‍ನಲ್ಲೇ ಇರುತ್ತದೆ. ಇದು ನನ್ನ ಮೊದಲ ಡಾಕ್ಯುಮೆಂಟರಿಯಾದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಕುರಿತು “ಮತ್ತೆ ಮತ್ತೆ ತೇಜಸ್ವಿ” ಮಾಡುವುದಕ್ಕೆ ಕೈ ಇಟ್ಟ ಮೊದಲ ದಿನದಿಂದಲೂ ಆಗಾಗ ನನಗೆ ನಾನೇ ಹೇಳಿಕೊಳ್ಳುವ ವೇದವಾಕ್ಯ.. ನಮ್ಮಲ್ಲಿ ಬಹಳಷ್ಟು ಮಂದಿ ಡಾಕ್ಯುಮೆಂಟರಿ ಫಿಲಂ ಮೇಕರ್ಸ್ ರಿಸರ್ಚ್ ಮಾಡಿಕೊಳ್ಳುವಿದಿಲ್ಲ, ಸಬ್ಜೆಕ್ಟ್ ಕ್ಲಾರಿಟಿ ಇಟ್ಟುಕೊಳ್ಳುವುದಿಲ್ಲ. ಸುಮ್ನೆ ಒಂದಷ್ಟು ಸಂದರ್ಶನಗಳನ್ನ ಸುತ್ತಿ, ಕೆಟ್ಟ ಕೆಟ್ಟ ವಾಯ್ಸ್ ಓವರ್ ಸೇರಿಸಿ ಹೇಗೊ ಒಂದು ಏನೋ ಒಂದು ಮಾಡಿದರಾಯಿತು ಎಂದುಕೊಳ್ಳುವ ಮನಸ್ಥಿತಿಯವರೇ ಕನ್ನಡದಲ್ಲಿ ಹೆಚ್ಚಿನವರು. ಅದರಲ್ಲೂ ಸರ್ಕಾರಕ್ಕೆ ಡಾಕ್ಯುಮೆಂಟರಿ ಮಾಡುವ ಕೆಲವರ ಬಗ್ಗೆಯಂತೂ ಹೇಳುವುದೇ ಬೇಡ. ಕಂಟೆಂಟ್ ಹಾಗೂ ಪ್ರೆಸೆಂಟೇಷನ್ ಎರಡೂ ವಿಭಾಗಗಳಲ್ಲೂ ಎಷ್ಟು ಸಾಧ್ಯವೊ ಅಷ್ಟ್ಟು ಕಳಪೆ ಗುಣಮಟ್ಟದಿಂದ ಕೂಡಿ ರಾರಾಜಿಸುತ್ತಿರುತ್ತವೆ. ಕೆಲವು ಸರ್ಕಾರಿ ಅಧಿಕಾರಿಗಳೂ ಹಾಗೆ ಇದ್ದಾರೆ. ಯಾರ್ಯಾರು ಎಷ್ಟೆಷ್ಟು ಪರ್ಸಂಟೇಜ್ ಕೊಡುತ್ತಾರೆ? ಎಂಬುದು ಎಷ್ಟೊ ಸಲ ಸಾಕ್ಷ್ಯಚಿತ್ರಗಳ ಹಂಚಿಕೆಗೆ ಮೊದಲ ಮಾನದಂಡ ಅವರಿಗೆ. ಹಾಗಾಗಿ ಸಿದ್ದವಾಗಿ ಬಂದ ಸಾಕ್ಷ್ಯಚಿತ್ರಗಳನ್ನು ಕನಿಷ್ಠ ನೋಡುವ ಶಾಸ್ತ್ರವನ್ನೂ ಮಾಡದೇ ಬಿಲ್ ಪಾಸ್ ಮಾಡಿಸಿ ಜೇಬು ತುಂಬಿಸಿಕೊಳ್ಳುವ ಮನಸ್ಥಿತಿಯಿಂದ ಹೊರಬರದ ಹೊರತು ಸಾಕ್ಷ್ಯಚಿತ್ರಗಳಂತಹ ಪ್ರಭಾವಶಾಲಿ ಮಾಧ್ಯಮ ಕನ್ನಡದಲ್ಲಿ ಸಶಕ್ತವಾಗಿ ಬೆಳೆಯುವುದು ಕಷ್ಟವಿದೆ. ಪಾಶ್ಚಾತ್ಯ ದೇಶಗಳಲ್ಲಿ ಡಾಕ್ಯುಮೆಂಟರಿ ಅಥವ ನಾನ್-ಫಿಕ್ಷನ್ ಮುಖ್ಯ ಸಿನಿಮಾಗಳಷ್ಟೇ ಪ್ರಭಾವಶಾಲಿಯಾಗಿರುವುದನ್ನ ನಾವು ಗಮನಿಸಬಹುದು. ಎನಿ ವೇ ಸಕಾರಾತ್ಮಕ ಬದಲಾವಣೆ ತುಂಬಾ ಸಮಯ ಬೇಡುತ್ತದೆ ಎಂಬ ಸತ್ಯವನ್ನ ನೆನಪಿಸಿಕೊಂಡು ಮುಂದುವರೆಯೋಣ. ವೇಣು ಅವರಿಗೆ ಕರೆ ಮಾಡಿ “ಬರ್ತೇನೆ ಸರ್ ದುರ್ಗಕ್ಕೆ” ಅಂದೆ. “ಶೂಟಿಂಗ್ ಶುರುನ?” ಕೇಳಿದರು. “ಇಲ್ಲ ಸಾರ್ ಇನ್ ಸ್ವಲ್ಪ ಕ್ಲಾರಿಟಿ ಬೇಕು. ಸೊ ನಿಮ್ ಹತ್ರ ಬರಬೇಕು ಡಿಸ್ಕಸ್ ಮಾಡ್ಬೇಕು” ಎಂದೆ. “ಯಾವಾಗ ಬರ್ತೀರ?” ಕೇಳಿದರು. “ನಾಡಿದ್ದು ಸರ್”. “ಒಕೆ. ಬೆಳಿಗ್ಗೆ 10 ಗಂಟೆ ಮೇಲೆ ಯಾವಾದ್ರೂ ನನಗ್ ಒಕೆ” ಎಂದರು. ಕರೆ ಕಟ್ ಆಯಿತು. ಅಡುಗೆ ಮನೆ ಕಡೆಯಿಂದ ಕುಕ್ಕರ್ ಸಿಳ್ಳು ಕೇಳಿತು. ಸವಿತಾ ಅನ್ನಕ್ಕೊ, ಬೇಳೆಗೊ ಕುಕ್ಕರ್ ಇಟ್ಟು ಮುದ್ದೆ ತಿರುವುತ್ತಿದ್ದಳು.142 views