EP6: ಭಗ್ನ ಪ್ರೇಮ ಎಂಬ ಯೂನಿವರ್ಸಿಟಿ! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ

Updated: Jan 24, 2021“ಅಲ್ಲ ಎಲ್ರೂ ಪ್ರೇಮಕತೇನೆ ನಂದೂ ಕೂಡ. ನಾವು ಏನು ಅಂತ ಆಲೋಚನೆ ಮಾಡದೆ ಪ್ರೇಮಿಸಿಬಿಟ್ಟಿರ್ತೀವಿ. ಪ್ರೇಮಿಸಿದಾಗ ಬಡತನ, ಸಿರಿತನ, ರೂಪ, ಕುರೂಪ ಏನೂ ಲೆಕ್ಕಕ್ಕೆ ಬರೋದಿಲ್ಲ. ಈ ಪ್ರೇಮಾನೇ ಹಾಗೆ! ಪ್ರೇಮಿಸಿದ್ ಆದ್ಮೇಲೆ ಮದ್ವೆ ವಿಷಯಕ್ ಬರುತ್ತಲ್ಲ ಅವಾಗ ಡಿಫರೆನ್ಸ್ ಆಫ್ ಒಪಿನೀಯನ್ನು, ಅಂತಸ್ತು, ಸ್ಟೇಟಸ್ಸು, ಜಾತಿ ಎಲ್ಲವೂ ಬರುತ್ತೆ. ಎಲ್ಲವೂ ಕೌಂಟ್ ಆಗ್ತವೆ. ನೋಡಿ ಅದಕ್ಕೆ ನನ್ನ ಇಡೀ ಬರವಣ ಗೆಯ ವಸ್ತು ಏನಿರುತ್ತೆ ಅಂದ್ರೆ ಒಂದು ಬಡತನ, ಒಂದು ಜಾತಿ, ಇನ್ನೊಂದು ಪ್ರೇಮ ಈ ಮೂರೇ ನನ್ನ ಬರವಣ ಗೆಯ ವಸ್ತುಗಳು. ನೀವು ಐತಿಹಾಸಿಕ ಕಾದಂಬರಿ ತಗೊಳ್ರಿ, ಸಾಮಾಜಿಕ ತಗೊಳ್ರಿ ಇಲ್ಲ ಲವ್ ಸ್ಟೋರಿ ಓದ್ರಿಲ್ಲಿ ಈ ಮೂರು ವಸ್ತುಗಳು ಇರ್ತವೆ. ನನ್ ದೃಷ್ಟಿಯಲ್ಲಿ ಬಡತನ ಅನ್ನೋದೇ ದೊಡ್ಡ ಯೂನಿವರ್ಸಿಟಿ. ಪಾವರ್ಟಿ ಈಸ್ ದ ಟೀಚರ್! ಒಬ್ಬ ಮನುಷ್ಯ ಹಸಿವಿನಲ್ಲಿ ಇದಾನೆ ಅಂತಂದ್ರೆ ಅದು ಬಡತನ, ಬಡತನ ಅಂದ್ರೆ ಅದು ಅಪಮಾನ, ಅಪಮಾನ ಅಂದ್ರೆ ಸೋಲು ಇವೆಲ್ಲವೂ ನಿಮಗೆ ಕಲಿಸಿಕೊಡುತ್ತೆ. ಅವೂ ಒಂತರ ಪಾಠ ಇದ್ದಂಗೆ. ಜೊತೆಗೆ ಜಾತೀಯತೆ. ಇವತ್ತು ಅವತ್ತಗಿಂತಲೂ ಜಾತಿ ತಾರತಮ್ಯ ತಾರಕಕ್ಕೇರಿದೆ, ಆದರೆ ಆಗಲೂ ಇತ್ತು. ನಿಮ್ಮ ಜಾತಿ ನಿಮಗೆ ಶತ್ರು ಅಂತ, ಸಾಮಾಜಿಕ ಶನಿ ಅಂತ ನಿಮಗೆ ಗೊತ್ತಾಗುತ್ತೆ ಅಂದ್ರೆ ಪ್ರೇಮಿಸಿರ್ತಾನಲ್ಲ ಆಗ ಗೊತ್ತಾಗುತ್ತೆ. ಅವೆಲ್ಲಾ ನನಗ್ ಅನುಭವಕ್ ಬಂದ್ವು. ನಾನು ಭಗ್ನ ಪ್ರೇಮಿ ಆದೆ! (ನಗು) ಯಾಕಂದ್ರೆ ನಾನು ತುಂಬಾ ಬಡತನದಲ್ಲಿರೊ ಮನುಷ್ಯ. ಪಾಪ ಅವಳಿಗೆ ಆಕಾಂಕ್ಷೆಗಳು ಜಾಸ್ತಿ ಇದ್ವು ಅಂತ ಕಾಣುತ್ತೆ. ಪ್ರೇಮಿಸಿದ್ರು ಕೂಡ ಯಾರೊ ಒಂದೇ ಜಾತಿ ಹುಡುಗ, ಕೈತುಂಬಾ ಸಂಪಾದನೆ ಇರೋನು ಸಿಕ್ಕ ಅಂತ ಕಾಣುತ್ತೆ ಮದ್ವೆ ಆದ್ರು. ಸುಖವಾಗಿದಾರೆ ಬಿಡಿ. ಆರ್ಕೆಸ್ಟ್ರಾದಲ್ಲಿ ಸಿಂಗರ್ ಆಕೆ. ಇಬ್ರೂ ಒಟ್ಟಿಗೆ ಹಾಡ್ತಿದ್ವಿ ಡೂಯೆಟ್ ಸಾಂಗ್ಸ್ ಇತ್ಯಾದಿ ಎಲ್ಲಾ. ಆ ಸಂದರ್ಭದಲ್ಲಿ ಏನೇನೊ ಕನಸು ಕಂಡು ಭ್ರಮೆ ಒಳಗ್ ಇದ್ವಿ. ಅದು ಹಿಂಗೆ ಠುಸ್ ಆಯ್ತು ಅಷ್ಟೆ” ಮೌನವಾದರು ಸರ್. “ಒಂದ್ ಮುಖ್ಯವಾದ ವಿಷಯ ಏನಂದ್ರೆ ನಾನು ಕಾಲೇಜಲ್ಲಿದ್ದಾಗ ನಾನು ಬಡವ ಅನ್ನೋದು ಮನೆಗೆ ಬಂದಾಗ ಮಾತ್ರ ನೆನಪಾಗ್ತಿತ್ತು. ಉಳಿದಂಗ್ ಮನೆ ಬಿಟ್ ಆಚೆ ಹೋದ್ರೆ ಆ ಸ್ನೇಹಿತರು, ಆ ಅವಕಾಶಗಳು, ಆ ಒಡನಾಟ ಜೊತೆಗೆ ದುರ್ಗದ ಕೋಟೆ ಕೊತ್ತಲಗಳು, ಬುರುಜು ಬತ್ತೇರಿಗಳು, ದೇವ ಮಂದಿರಗಳು, ಗವಿ ಬಂಡೆಗಳು ಇತ್ಯಾದಿ ಅಲೆದಾಡ್ತಾ ಇದ್ರೆ ಹಸಿವು ಆಗ್ತಿರ್ಲಿಲ್ಲ, ನಾನ್ ಬಡವ ಅನ್ನೋದು ನೆನಪಾಗ್ತಿರ್ಲಿಲ್ಲ. ಮನೆಗ್ ಬಂದಾಗ “ಓಹ್ ನಮ್ ಮನೇಲಿ ಕಷ್ಟ ಇದೆ. ನಾನು ದುಡಿಬೇಕು ಕುಟುಂಬ ಸಾಕಬೇಕು” ಅಂತ ವಾಪಸ್ ಕನೆಕ್ಟ್ ಆಗೋದು. ಹಾಗಿತ್ತು ನನ್ನ ಕಾಲೇಜ್ ಡೇಸ್” ಮತ್ತೆ ಕ್ಷಣ ಹೊತ್ತು ಮೌನಕ್ಕೆ ಶರಣಾದರು. ನಾನೇ ಮತ್ತೆ ಲೀಡ್ ಕೊಡಲು ನಿರ್ಧರಿಸಿ ಕೇಳಿದೆ “ಮುಂದೆ ಸರ್?” “ನಾನ್ ಅವಾಗ್ಲೆ ಕತೆಗಳನ್ನೆಲ್ಲಾ ಬರೆಯೋಕ್ ಶುರು ಮಾಡಿದ್ದೆ” ವೇಣು ಸರ್ ಹೊಸ ಮೂಡ್‍ಗೆ ಬಂದು ಮುಂದುವರೆಸಿದರು.217 views