EP7: ಅತ್ತರಿನ ಪರಿಮಳವೂ ಗುಲ್ಬರ್ಗಾ ರಣಬಿಸಲೂ! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ

Updated: Jan 24, 2021


“ಅದೇ ಟೈಮಿಗೆ ಗುಲ್ಬರ್ಗಾಕ್ಕೆ ಹಾಕಿದ್ರಲ್ಲ. ನಮ್ ಅಮ್ಮನಿಗಂತೂ ನಾನು ಗುಲ್ಬರ್ಗಾಕ್ಕೆ ಹೋಗೋದು ಒಂಚೂರು ಇಷ್ಟ ಇರಲಿಲ್ಲ. ಮ್ಯಾಪ್‍ನಲ್ಲಿ ನೋಡಿದ್ರೆ ಗುಲ್ಬರ್ಗಾ ಅಂದ್ರೆ ಹೆದರ್ತಿದ್ರು. “ಅಯ್ಯಯ್ಯೊ ಅದ್ಯಾವ್ದೊ ದೇಶ ಬ್ಯಾಡ ಹೋಗೋದು. ನಾವು ತಿರ್ಕೊಂಡ್ ತಿಂದ್ರೂ ಪರ್ವಾಗಿಲ್ಲ ಬ್ಯಾಡ ಹೋಗೋದು” ಅಂತಿದ್ರು ನಮ್ಮಮ್ಮ. ನಾನೇಳ್ದೆ ತಿರ್ಕೊಂಡೇ ತಿನ್ಬೇಕಾಗುತ್ತೆ. ಹೋಗ್‍ಬುಡ್ತೀನಿ ಗೌರ್ಮೆಂಟ್ ಕೆಲ್ಸ್ ಸಿಕ್ಕಿದೆ ಅಂತ ಹೋದೆ ನೋಡಿ ಸಾರ್ ಆವಾಗ. ಅಲ್ಲಿ ಭಾಷೆ ಎಲ್ಲಾ ಹಿಂದೀನೇ. ಅಲ್ಲಿ ನನಗೆ ಅನ್ನ ಹಾಕಿದ್ದು ನಮ್ ಕಿಶೋರ್ ಕುಮಾರ್!” “ಯಾರು ಸಿಂಗರ್ ಕಿಶೋರ್ ಕುಮಾರ ಸಾರ್?” ಕೇಳಿದೆ. “ಹೌದೌದು ಗಾಯಕ ಕಿಶೋರ್ ಕುಮಾರ್. ನಾನು ಕಿಶೋರ್ ಕುಮಾರ್ ಹಾಡುಗಳನ್ನ ತುಂಬಾ ಚೆನ್ನಾಗ್ ಹಾಡ್ತಿದ್ದೆ. ಪಿ.ಬಿ ಶ್ರೀನಿವಾಸ್ ಹಾಡು ಹಾಡ್ತಿದ್ದೆ. ಆದರೆ ಕಿಶೋರ್ ಕುಮಾರ್ ಹಾಡಿಗೆ ಫೇಮಸ್ ಆಗಿದ್ದೆ ನಾನು ಆರ್ಕೆಸ್ಟ್ರಾದಲ್ಲಿ. ಅಲ್ಲಿ ಗುಲ್ಬರ್ಗಾದ ನಮ್ ಆಫೀಸ್‍ನಲ್ಲಿದ್ದ ಒಟ್ಟು 26 ಜನ ಸ್ಟಾಫ್‍ಗಳ್ಲಿ 23 ಜನ ಮುಸ್ಲಿಂಸು! ನಾವು ಮೂರು ಜನ ಹುಡುಗ್ರು ಮಾತ್ರ ಹಿಂದು ಹುಡುಗ್ರು. ಅಲ್ಲಿ ಆಫೀಸಿಗೆ ಹೋದಾಗ “ಆಯಿಯೇ ಆಯಿಯೇ” ಅಂತ ನಮ್ಮನ್ನ ಅಪ್ಪಿಕೊಂಡು ಬಿಟ್ರೆ ಸಾಕು ನಾವು ಘಮಘಮ ಆಗ್ಬಿಡ್ತಿದ್ದವಿ. ಅಷ್ಟು ಸೆಂಟ್ ಹಾಕೊಂಡ್ ಬರೋರು! ಅದೊಂದು ಕಲ್ಚರ್ ಅವ್ರುದ್ದು. ಬಟ್ ತುಂಬಾ ಚೆನ್ನಾಗ್ ನೋಡ್ಕ್ಯಂಡ್ರು. ಹಾಡ್ತೀನಿ ಅಂತ ಗೊತ್ತಾದ್ಮೇಲೆ ಮನೆಗಳಿಗ್ ಕರ್ಕೊಂಡ್ ಹೋಗ್ ಹಾಡ್ಸಿದ್ರು. “ಹಮಾರ ಘರ್ ಮೆ ಕಾತೆಹೊ ಕ್ಯಾ?” ಅಂತ ಕೇಳಿದ್ರು. ಅವರಿಗೆ ನನಗೆ ಊಟ ಮಾಡಿಸ್ಬೇಕು ಅಂತ ಆಸೆ. ನನಗೇನು ಈ ಜಾತಿ ಮತ ಅನ್ನೊ ವ್ಯಾಮೋಹ ಆಗ್ಲೂ ಇರಲಿಲ್ಲ, ಈಗ್ಲೂ ಇಲ್ಲ ಬಿಡಿ. “ಮಾಡ್ತೀನಿ” ಅಂದೆ. ಸಾರ್ ಅವರು ಮುಸ್ಲಿಂಸು ಹಿಂಗೆ ನನ್ನನ್ನ ಮೂರು ಸಾಕ್‍ಬಿಟ್ರು. ಅಂದ್ರೆ ಕಿಶೋರ್ ಕುಮಾರೇ ನನಗ್ ಹೆಲ್ಪ್ ಮಾಡ್ದ ಅಂತ ನಾನು ಅಂದ್ಕಂಡೆ. ಆಗ ನಾನು ದುರ್ಗಕ್ ಬರ್ತಿದಿದ್ದೇ ದೀಪಾವಳಿಗ್ ಒಂದ್ಸಾರಿ, ಯುಗಾದಿಗ್ ಒಂದ್ಸಾರಿ. ನಮ್ಮಮ್ಮ “ಅಯ್ಯೋ ನನ್ಮಗ ಗುಲ್ಬರ್ಗಾಕ್ ಹೋಗ್‍ಬಿಟಿದಾನೆ, ಊಟ ತಿಂಡಿ ಇಲ್ದೆ ಒಣಗ್ ಹೋಗ್ತಾನೇನೊ, ಮೊದ್ಲೇ ಪೇಷಂಟ್ ತರ ಇದಾನೆ” ಅಂತ ಕೊರಗಿತಿದ್ರೆ ನಾನಿಲ್ಲಿ ಮುಸಲ್ಮಾನ್ರ ಮನೇಲಿ ತಿನ್ಕೊಂಡ್ ಉಣ್ಕೊಂಡ್ ಗುಂಡಗ್ ಆಗ್ಬಿಟ್ಟಿದ್ದೆ. 6 ತಿಂಗಳು ಬಿಟ್ಮೇಲೆ ನಮ್ಮಮ್ಮ ನನ್ ನೋಡಿ ಶಾಕ್ ಆಗ್ಬಿಟ್ಟಿದ್ರು. ಆಮೇಲ್ ನನಗೆ ದಾವಣಗೆರೆಗೆ ಟ್ರಾನ್ಸ್‍ಫರ್ ಆಯ್ತು ಈ ಕಡೆ ಬಂದೆ. ಅವರೇ ಅಂದರೆ ಗುಲ್ಬರ್ಗಾ ಆಫೀಸ್‍ನವರೇ ಪಾಪ “ಬಚ್ಚೆ ಬಹುತ್ ದೂರ್ ಸೇ ಆಯಾ ಹೈ ಪೇಟ್ ಕೆ ಲಿಯೇ” ಅಂತ ಹೇಳಿ ಏನೇನೊ ಮಾಡಿ ದಾವಣಗೆರೆಗೆ ಟ್ರಾನ್ಸ್‍ಫರ್ ಮಾಡ್ಸಿ ಪ್ರೀತಿಯಿಂದ ಕಳಿಸಿಕೊಟ್ರು. ದಾವಣಗೆರೆಗೆ ಬಂದೆ. ನಂತರ ದುರ್ಗದ ಆಸ್ಪತ್ರೇಲಿ ಕೆಲಸ ಮಾಡಿ ರಿಟೈರ್ ಆದೆ. ಅದು ಬೇರೆ ಕತೆ ಬಿಡಿ. ಈ ಮಧ್ಯೆ ಅಲ್ಲಿ ಗುಲ್ಬರ್ಗಾದಲ್ಲಿ ಒಂಟಿ ಜೀವನ ಅಲ್ಲ. ಬೆಳಿಗ್ಗೆ ಏನೂ ಚಿಂತೆ ಇರ್ತಿರ್ಲಿಲ್ಲ. ಆದರೆ ಸಾಯಂಕಾಲ ಆಗ್ತಿದ್ದಂಗೆ “ಹೆಂಗ್ ಸಮಯ ಕಳಿಯೋದು?” ಅನ್ನೊ ಚಿಂತೆ ಸ್ಟಾರ್ಟ್ ಆಯ್ತು. ಹಂಗಾಗಿ “ಏನಾದ್ರೂ ಬರೀಲ?” ಅನ್ನೋ ಆಲೋಚನೆ ಸ್ಟಾರ್ಟ್ ಆಯ್ತು. ಇದಕ್ ಮೊದ್ಲು ಕಾಲೇಜ್‍ನಲ್ಲಿದ್ದಾಗ ಲವ್ ಲೆಟ್ರುಗುಳ್ ಬರಿತಿದ್ನಲ್ಲ ಆ ಲೆಟರ್‍ಗಳನ್ನ ಓದಿ “ಇದಕ್ಕೆ ಒಂದು ಹೆಡ್ಡಿಂಗ್ ಕೊಟ್‍ಬಿಟ್ರೆ ಇದೇ ಒಂದು ಕತೆ ಆಗಂಗಿದೆ” ಅಂತ ಹೇಳ್ತಿದ್ರು ನಮ್ ಹುಡುಗಿ. ‘ಇದೇನಿದು ಕತೆ ಬರೀ ಅಂತ ಹೇಳ್ತಾಳಲ್ಲ’ ಅಂತ ಹೇಳಿ ಕತೆ ಬರೆಯಕ್ ಶುರು ಮಾಡ್ದೆ. “ಅಂದ್ರೆ ನೀವು ಬರಹಗಾರ ಆಗಬಹುದು ಅನ್ನೋದನ್ನ ಗುರುತಿಸಿದ್ದು ನಿಮ್ ಹುಡುಗಿ. ಕರೆಕ್ಟ?” ಕೇಳಿದೆ ನಾನು. “ಹೌದೌದು. “ನಿಮ್ ಲವ್ ಲೆಟರ್ರೇ ಕತೆ ತರ ಇದೆ. ನೀವು ಬರಿಬಹುದು” ಅಂತ ಹೇಳ್ತಿದ್ರು ನಮ್ ಲವ್ವರ್. ನನಗ್ ನಂಬಿಕೆ ಇಲ್ಲ. ನೋಡಣ ಅಂತ ಸುಮಾರು ಬರೆದೆ. ಆದರೆ ಯಾವ ಪೇಪರ್‍ನೋರು ಯಾವ್ ಕತೆನೂ ಪ್ರಿಂಟ್ ಮಾಡಲಿಲ್ಲ. ಎಲ್ಲಾ ವಾಪಸ್ ಬರ್ತಿದ್ವು. ಹಾಳಾಗ್ ಹೋಗ್ಲಿ ನನಗೂ ಇದಕ್ಕೂ ಆಗ್‍ಬರಲ್ಲ ಅಂತ ಬಿಟ್‍ಬಿಟ್ಟಿದ್ದೆ. ನನ್ನ ಕನಸೇನಿತ್ತು ಅಂದ್ರೆ ಒಂದ ಮ್ಯೂಸಿಕ್ ಡೈರೆಕ್ಟರ್ ಆಗ್ಬೇಕು ಇಲ್ಲ ಪ್ಲೇಬ್ಯಾಕ್ ಸಿಂಗರ್ ಆಗ್ಬೇಕು ಅಂತ ಕನಸು ಕಾಣ ್ತದ್ದೆ ಆಗ. ಆದರೆ ಅದೂ ಆಗಲ್ಲ ಯಾಕಂದ್ರೆ ಯಾರೋ ಹಾಡಿರೋದನ್ನ ಮಕ್ಕಿಕಾಮಕ್ಕಿ ಕಾಪಿ ಮಾಡಿ ಹಾಡ್ತಿದ್ದೋರ್ ನಾವು. ಅದಕ್ ಬೇರೆ ತರದ ಪ್ರತಿಭೆ ಬೇಕು ಅಂತ ಗೊತ್ತಾಗಿ ಮ್ಯೂಸಿಕ್ ಹುಚ್ಚು ಕೂಡ ಬಿಟ್ಟಾಕಿದ್ದೆ. ಆಗ 1976ರಲ್ಲಿ ನನ್ನದೊಂದು ಕತೆ ಕನ್ನಡ ಪ್ರಭದಲ್ಲಿ ಪ್ರಿಂಟ್ ಆಗಿತ್ತು “ನನ್ನತನ ಕುಗ್ಗಿದಾಗ” ಅಂತ. ನನಗೇ ಗೊತ್ತಿಲ್ಲ ಅದು. ಯಾರೋ ಸ್ನೇಹಿತರ ಮನೇಲಿ ಕಾಫಿ ಕುಡೀತಾ ಕೂತಿದ್ದಾಗ ಕೊಟ್ಟರು “ನೋಡೋ ನಿಂದು ಕತೆ ಬಂದಿದೆ ಪೇಪರಲ್ಲಿ” ಅಂತ. ನನಗೆ ಶಾಕ್ ಅದು, ಖುಷಿ. ಅದೇನ್ ಬಂದಿದೆ ನೋಡ್ಬೇಕಲ್ಲ, ನನ್ ಕತೆ ನಾನೇ ಓದ್ಬೇಕಲ್ಲ ಅಂತ ಅನ್ನಿಸ್ತಿದೆ. ಆದರೆ ಎಲ್ಲರ ಎದುರಿಗೆ ಓದೋಕೆ ನಾಚಿಕೆ ಆಗಿ ದುರ್ಗದ ಕೋಟೆ ಒಳಕ್ಕೆ ಹೋಗಿ ಒಬ್ಬನೇ ಕೂತು ಆ ಕತೆ ಓದಿ ಎಂಜಾಯ್ ಮಾಡಿದ್ದೀನಿ. ಖುಷಿಯಾಯ್ತು. ಸರಿ ನೋಡನ ಅಂತ ಮತ್ತೆ ಕನ್ನಡ ಪ್ರಭಕ್ಕೆ ಇನ್ನೊಂದು ಕತೆ ಕಳಿಸ್ದೆ. ಅದೂ ಪ್ರಕಟ ಆಯ್ತು. “ಧೂಳು” ಅಂತ ಕತೆ ಅದು. ನಮ್ ಹಾಸ್ಪೆಟ್ಳು ಜೀವನಾನೇ ಇಟ್ಕೊಂಡ್ ಬರೆದಿದ್ದೆ. ಆ ಕತೆ ಬಂದ್ಮೇಲೆ ಒಂದು ಸಂಚಲನ ಕ್ರಿಯೇಟ್ ಮಾಡಿತ್ತು. ಆಮೇಲ್ ನೋಡನ ಅಂತ ಮಯೂರಗೊಂದ್ ಕತೆ ಕಳಿಸ್ದೆ ಅಲ್ ಪ್ರಕಟ ಆಯ್ತು. ಸುಧಾಗೊಂದ್ ಕಳಿಸ್ದೆ ಅಲ್ಲೂ ಪ್ರಕಟ ಆಯ್ತು, ಪ್ರಜಾಮತಕ್ಕೆ ಕಳಿಸ್ದೆ ಅಲ್ಲೂ ಪ್ರಿಂಟ್ ಆಯ್ತು. ಹೀಗೆ ಪತ್ರಿಕೆಗಳ ಸಂಪಾದಕರು ಗುರುತಿಸಿ ನನ್ನ ಕತೆಗಳನ್ನ ಪ್ರಕಟಿಸೋಕ್ ಪ್ರಾರಂಭಿಸಿದರು. ಆಮೇಲೆ “ಲಿಂಗ ನೆಟ್ಟ ಪ್ರಸಂಗ” ಅಂತ ಒಂದು ಕತೆ ಬಂದಿತ್ತು ಪ್ರಜಾಮತದಲ್ಲಿ. ಅದಕ್ಕೆ ರಾಜ್ಯ ಮಟ್ಟದ ಕಥಾಸ್ಫರ್ಧೆನಲ್ಲಿ ಫಸ್ಟ್ ಪ್ಲೇಸ್ ಬಂತು.

ಆಮೇಲೆ ಗುಲ್ಬರ್ಗಾದಲ್ಲಿ ನೋಡಿದ್ದ ಬೆತ್ತಲೆ ಸೇವೆ ಬರೆದೆ. ಅದಕ್ಕೂ ಫಸ್ಟ್ ಫ್ರೈಝ್ ಬಂತು. ಅದನ್ನ ಓದಿ ಹಾ.ಮಾ ನಾಯಕ್ರು ಒಂದು ಕಾರ್ಡ್ ಬರೆದಿದ್ರು. ಆಗೆಲ್ಲಾ ಸಣ್ಣ ಕಾರ್ಡ್ ಬರೆಯೋದು ಪದ್ದತಿ. “ಈ ಕತೆಯ ಹರವು ಬಹಳ ದೊಡ್ಡದು. ಇದನ್ನ ಕಾದಂಬರಿ ಮಾಡಿ” ಅಂತ ಬರೆದ್ರು. ಸರಿ ಅಂತ ಅದನ್ನ ಕಾದಂಬರಿ ಆಗಿ ವಿಸ್ತರಿಸಿದೆ. ಅದನ್ನ ಒಬ್ರು ಆಗ ಪ್ರಿಂಟ್ ಹಾಕಿದ್ರು. ಅದಾದ್ಮೇಲೆ ಸಿನಿಮಾ ಆಯ್ತು ಅಂತ ಇಟ್ಕೊಳಿ. ಸುಧಾದಲ್ಲಿ ‘ಅಂತಂತ್ರರು’ ಅಂತ ಒಂದು ಕಾದಂಬರಿ ಬರ್ತಿತ್ತು ಧಾರಾವಾಹಿ ಆಗಿ. ಅದಕ್ಕೂ ಪ್ರಥಮ ಬಹುಮಾನ ಬಂತು. ಹೀಗೆ ನನ್ನ ಬರವಣ ಗೆಯ ಬದುಕು ಟೇಕಾಫ್ ಆಗಿತ್ತು. ಆಗ ನೆನಪಾಗಿದ್ದು ನಮ್ ಲವ್ವರ್ ಹೇಳಿದ್ ಮಾತು “ಅಫ್ಟ್ರಾಲ್ ನೀವ್ ಏನಾಗೋಕ್ ಆಗುತ್ತೆ? ಪಿ.ಬಿ ಶ್ರೀನಿವಾಸ್ ಅಂತು ಆಗಕ್ಕಾಗಲ್ಲ. ಏನೋ ಒಂಚೂರು ಬರಿತೀರ. ಆದ್ರೆ ನಿಮ್ಮಂಗ್ ಬರೆಯೋರು ಸಾವಿರಾರು ಜನ ಇದಾರೆ. ಅನಂತಮೂರ್ತಿ ಆಗೋಕ್ ಆಗುತ್ಯೆ ನಿಮಗೆ?” ಹಿಂಗೆಲ್ಲಾ ಕೇಳ್ತಿದ್ರು ಕೊನೆಕೊನೇಲಿ ಅವರು. ಅಲ್ಲಿಗೆ ನನಗ್ ಸ್ಮೆಲ್ ಬಂತು. ಗೊತ್ತಾಗುತ್ತಲ್ಲ? ಏನೋ ಬೇರೆ ಕತೆ ಶುರುವಾಗಿದೆ ಅಂತ. ಹಾಗೆ ಆಯ್ತು ಬಿಟ್ಟೋದ್ರೂ ಬಿಡಿ ನಿನ್ ಕೈಲಿ ಏನೂ ಆಗಲ್ಲ ಅಂತೇಳಿ. ಅದೇ ಕಾರಣವೋ ಏನೋ ನಾನು ರೈಟಿಂಗಿಂಗೆ ಕಚ್ಕೊಂಡು ಬರೀತಾ ಹೋದೆ. ಅದು ಇಲ್ಲಿವರೆಗೂ ತಂದು ನಿಲ್ಲಿಸ್ತು. ಅದಕ್ಕೆ ನಾನು ಅವರಿಗೆ ಥ್ಯಾಂಕ್ಸ್ ಹೇಳ್ತೀನಿ” ದೊಡ್ಡದೊಂದು ನಿಟ್ಟುಸಿರು ಬಿಟ್ಟರು ವೇಣು ಸರ್. ನಾನು ನಮ್ಮ ರವಿ ಹಾಗೂ ವಸಂತ್ ಕಡೆ ನೋಡಿದೆ. ಅವರಿಬ್ಬರೂ ಕೂಡ ಅಷ್ಟೇ ತದೇಕಚಿತ್ತದಿಂದ ಅವರ ಬದುಕಿನ ಕತೆ ಕೇಳುತ್ತಾ ತನ್ಮಯರಾಗಿದ್ದಂತೆ ಕಂಡು ಬಂತು. ಅವರ ಆ ಮೂಡ್ ಹಾಳು ಮಾಡಲು ಇಷ್ಟವಿಲ್ಲದೆ ಬೇರೆ ಪ್ರಶ್ನೆ ಕೇಳದೇ ಸುಮ್ಮನೆ ಕೂತಿದ್ದೆ. ಕೆಲವು ಕ್ಷಣಗಳ ಮೌನದ ನಂತರ ಸರ್ ತಾವೇ ಮುಂದುವರೆಸಿದರು “ಹೀಗೆ ನಮ್ ಬದುಕು. ಆಮೇಲೆ ಪ್ರಜಾವಾಣ ಪೇಪರ್‍ನಲ್ಲಿ ಕತೆ ಬರಬೇಕು ಅನ್ನೋದು ನನಗೊಂದು ಆಸೆ. ಸುಮಾರ್ ಕತೆಗಳನ್ನ ಕಳಿಸ್ತಿದ್ದೆ. ಎಲ್ಲಾ ವಾಪಸ್ ಬರೋವು. ಅದೇ ಟೈಮಿಗೆ ನಮ್ ದುರ್ಗದವರೇ ಒಬ್ಬರು ವೈಕುಂಠರಾಜು ಅಂತ ಅವರು ಪ್ರಜಾವಾಣ ಲಿದ್ರು. ಅವರು “ಏಯ್ ಎಷ್ಟ್ ಕತೆ ಕಳಿಸ್ತಿಯೊ? 50 ಕತೆ ಆದ್ರೂ ವಾಪಸ್ ಬಂದಿಲ್ವೆ? ಸಾಕು ಸುಧಾ, ಮಯೂರದಲ್ಲಿ ಬರುತ್ತಲ್ಲ” ಅಂತ ನೇರವಾಗಿ ಟೀಕಿಸೋರು. ಅವರು ಪ್ರಜಾವಾಣ ಲಿ ಇರೊ ತನಕ ನನ್ನ ಒಂದು ಕತೆ ಕೂಡ ಪ್ರಕಟ ಆಗ್ಲಿಲ್ಲ. ಅವರು ಪ್ರಜಾವಾಣ ಬಿಟ್ಟ ಎರಡು ವಾರಕ್ಕೆ ನನ್ನ ಕತೆ ಪ್ರಜಾವಾಣ ಲಿ ಪ್ರಕಟ ಆಯ್ತು. ಜಿದ್ದಿಗೆ ಬಿದ್ರು ನೋಡಿ ಅವರು. ಇನ್ನ ಇಲ್ಲಿ ಅರಾಸೇ ಅಂತ ಮತ್ತೊಬ್ರು ಲೇಖಕರಿದ್ರು. ಅವರು “ನಿನಗೆ ಕಾಮು ಗೊತ್ತೆ? ಕಾಫ್ಕಾ ಗೊತ್ತೆ? ಕಾರ್ಲ್ ಮಾಕ್ರ್ಸ್ ಗೊತ್ತೆ? ದಾಸ್ತಾವಸ್ಕಿ ಗೊತ್ತೆ?” ಅನ್ನೋರು. “ಇಲ್ಲ” ಅಂದ್ರೆ “ಮತ್ಯಾಕ್ ಬರೀತಿ? ನಿಲ್ಲಿಸ್‍ಬಿಡು ಬರೆಯೋದು. ಈಗಾಗಲೇ ಪಂಪ, ರನ್ನ, ಜನ್ನ ಎಲ್ಲಾ ಬೇಕಾದಷ್ಟು ಬರೆದುಬಿಟ್ಟಿದ್ದಾರೆ. ಇನ್ ಬರೆಯೋಕೆ ಏನಿದೆ? ಬರಿಬೇಡ ನೀನು ಈ ರೀತಿ ಹೇಳೋರು. ಅಲ್ಲ ಒಂದು ಕಡೆ ನನ್ನ ಕತೆಗಳಿಗೆ ಪ್ರಥಮ ಬಹುಮಾನಗಳು ಬರ್ತಾ ಇದಾವೆ, ಇನ್ನೊಂದು ಕಡೆ ಈ ರೀತಿ ಟೀಕೆಗಳು “ನೀನು ಬರಿಬೇಡ” ಅಂತ. ಈ ರೀತಿ ವಿಚಿತ್ರ ಪ್ರೋತ್ಸಾಹಗಳೆಲ್ಲಾ ಸಿಕ್ಕವು ನನಗೆ. ಆದರೆ ಆ ಟೀಕೆಗಳೇ ನನ್ನನ್ನ ಒಳ್ಳೆ ಲೇಖಕನಾಗಿ ಬೆಳೆಸಿದ್ದು ಅನ್ನೋದು ನನ್ನ ನಂಬಿಕೆ. ನಾನ್ ಬರೆದಿದ್ದೆಲ್ಲಾ ಚೆನ್ನಾಗಿದೆ ಅಂತ ಅಂದುಬಿಟ್ಟಿದ್ದರೆ ಇನ್ನೂ ಚೆನ್ನಾಗ್ ಬರಿಬೇಕು ಅನ್ನೋ ಹಠ ನನ್ನಲ್ಲಿ ಹುಟ್ತಾನೆ ಇರಲಿಲ್ಲ. ಇವತ್ತು ನಿಮ್ ಮುಂದೆ ಕೂತಿರ್ತಾನೆ ಇರಲಿಲ್ಲ. ಅಲ್ವ?” ವೇಣು ಸರ್ ಸುದೀರ್ಘವಾದ ತಮ್ಮ ಮಾತಿಗೆ ಅಲ್ಪವಿರಾಮ ಹಾಕುವವರಂತೆ ದೀರ್ಘವಾಗಿ ಉಸಿರೆಳೆದು ಖುರ್ಚಿಯ ಹಿಂದಕ್ಕೆ ಒರಗಿದರು. ನಮ್ಮ ಕ್ಯಾಮೆರಾಮನ್ ರವಿರಾಜ್ “ಲೈಟ್ ಹೀಟ್ ಆಗಿರುತ್ತೆ. ಒಂದೆರಡು ನಿಮಿಷ ಬ್ರೇಕ್ ಮಾಡೋಣ” ಎಂದರು. ಸೊ ವೇಣು ಸರ್ ಅವರ ಅನುಭವ ಕಥನಕ್ಕೆ ಪುಟ್ಟ ಬ್ರೇಕ್ ಬಿತ್ತು. ನಮ್ಮ ನವಾಜುದ್ದೀನ್ ಸಿದ್ದಿಕಿ ತಲೆ ಕೆರೆದುಕೊಳ್ಳುತ್ತಾ ಲೈಟ್ ಕೆಳಗಿಳಿಸಲು ಹೋದ. ವೇಣು ಸರ್ “ಬಂದೆ” ಎಂದು ಹೇಳಿ ಒಳಗೆ ಹೋದರು. “ಬಡತನ, ಹಸಿವು, ಅವಮಾನ, ಟೀಕೆಗಳೇ ನನ್ನನ್ನ ಬೆಳೆಸಿದ್ದು” ಎಂಬ ಅವರ ಅದುವರೆಗಿನ ಮಾತಿನ ತಿರುಳು ನನ್ನ ಮನಸ್ಸಿನೊಳಗಿಳಿದು ಕಾಡತೊಡಗಿತು.


228 views