EP8: ಮದಕರಿ ನಾಯಕ ಮತ್ತು ತ.ರಾ.ಸು ತಂಟೆಗಳು! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ

Updated: Jan 24, 2021ವೇಣು ಸರ್ ಒಳಗೆ ಹೋದ ಐದು ನಿಮಿಷಗಳೊಳಗೆ ಕಾಫಿ ಬಂತು. ನಮಗೂ ಅದರ ಅವಶ್ಯಕತೆ ತುಂಬಾನೇ ಇತ್ತು. ಬಿಸಿಬಿಸಿ ಕಾಫಿಯ ಪ್ರತಿ ಗುಟಕನ್ನೂ ಅನುಭವಿಸುತ್ತಾ ಹೀರುತ್ತಿದ್ದಾಗ ವೇಣು ಸರ್ ಬಂದು ಎಂದಿನ ತಮ್ಮ ಜಾಗದಲ್ಲಿ ಕೂತು ಟೇಬಲ್ ಮೇಲಿಟ್ಟಿದ್ದ ಕಾಫಿ ಕೈಗೆತ್ತಿಕೊಂಡರು. “ಬೋರ್ ಆಗ್ತಿದ್ಯ?” ಕೇಳಿದರು. ನಾವು ಮೂರೂ ಮಂದಿ “ಛೇ ಛೇ ಇಲ್ಲ ಸಾರ್. ಎಂಥ ಥ್ರಿಲ್ಲಿಂಗ್ ಲೈಫ್ ನಿಮ್ದು. ಬೋರ್ ಅನ್ನುವ ಪ್ರಶ್ನೆನೇ ಇಲ್ಲ” ಎಂದು ಒಕ್ಕೊರಲಿನ ಅನೌನ್ಸ್‍ಮೆಂಟ್ ಮಾಡಿ ಅವರ ಉತ್ಸಾಹ ಕುಂದದಂತೆ ನೋಡಿಕೊಂಡೆವು. ನಿಜಕ್ಕೂ ಅವರ ಬದುಕಿನ ಮುಂದಿನ ಜರ್ನಿ ಕೇಳಲು ನಾವು ಉತ್ಸುಕರಾಗಿದ್ದೆವು. “ನಾನು ಎಲ್ಲಾ ಡೀಟೇಲಾಗ್ ಹೇಳ್ಬಿಡ್ತೀನಿ. ನಿಮಗ್ ಎಷ್ಟೊ ಬೇಕೊ, ಯಾವ್ದ್ ಬೇಕೋ ಇಟ್ಕೊಳಿ” ಎನ್ನುತ್ತಾ ಕಾಫಿಯ ಕೊನೆಯ ಗುಟುಕು ಏರಿಸಿ ಲೋಟ ಪಕ್ಕಕ್ಕಿಟ್ಟರು. ರವಿ ಕೈಲಿದ್ದ ಕೆನಾನ್ 5ಡಿ ರೋಲ್ ಆಯಿತು. ನಮ್ಮ ನವಾಜ್ ನನ್ನ ಪಕ್ಕ ಬಂದು ಕೂತ. “ಎಲ್ಲಿದ್ದೆ?” ವೇಣು ಸರ್ ಕೇಳಿದರು. “ಅದೆ ಸಾರ್, ಟೀಕೆಗಳಿಂದ ನೀವು ಒಳ್ಳೆಯ ಲೇಖಕರಾಗಿ ಬೆಳೆದಿದ್ದು” ಉತ್ತರಿಸಿದೆ. “ಹಾ,” ಕನೆಕ್ಷನ್ ರಿ-ಎಷ್ಟ್ಯಾಬ್ಲಿಷ್ ಮಾಡಿಕೊಂಡು ಮುಂದೆ ಸಾಗಿದರು. “ಸರಿ ಹೀಗೆ ನನ್ನ ಬರವಣ ಗೆಯ ಜೀವನ ಪ್ರಾರಂಭ ಆಯ್ತು. ಆಗ ನನ್ ಸ್ನೇಹಿತರು ಕೆಲವರು “ಏಯ್ ಏನೇನೋ ಬರಿತೀಯ ನೀನು. ದುರ್ಗದಲ್ಲಿ ಹುಟ್ಟಿದ್ದೀಯ. ಮದಕರಿ ನಾಯಕನ ಕಾದಂಬರಿ ಬರೆದುಬಿಡು” ಅಂತ ಮಾತಾಡೋಕ್ ಶುರು ಮಾಡಿದ್ರು. ಸರಿ ನನಗೂ ಅನ್ನಿಸ್ತು ಬರಿಬೇಕು ಅಂತ. ಮದಕರಿ ನಾಯಕ ಕಾದಂಬರಿ ಬರೆಯೋದು ಅಂದ್ರೆ ಸುಮ್ನೇನ? ಇತಿಹಾಸ ಎಲ್ಲಾ ಅಧ್ಯಯನ ಮಾಡ್ಬೇಕು. ಸರಿ ಎಲ್ಲಾ ಸ್ಟಡಿ ಮಾಡ್ಕೊಂಡ್ ಶುರು ಮಾಡ್ದೆ. ಆ ಟೈಮಲ್ಲಿ ತರಾಸು ಅವರು ಬರಿತಾರೆ ಅಂತ ಸುದ್ದಿ ಆಗಿತ್ತು ಇಲ್ಲೆಲ್ಲಾ. ಅವರಿಗೆ ನಮ್ಮೂರ್ನೋರೆಲ್ಲಾ ಹೋಗಿ ಸನ್ಮಾನ ಮಾಡಿ ಮದಕರಿ ನಾಯಕ ಕಾದಂಬರಿ ಬರಿಬೇಕು ಅಂತ ಕೇಳ್ಕಂಡಿದ್ರು. ಇದು ಆಗಿ ಹತ್ತು ವರ್ಷ ಆದ್ರೂ ತರಾಸು ಅವರು ಕಾದಂಬರಿ ಬರೆದೇ ಇರಲಿಲ್ಲ. ಹತ್ತು ವರ್ಷದ ಹಿಂದೆ ನಾನು ಸಾಹಿತಿನೇ ಆಗಿರಲಿಲ್ಲ ಬಿಡಿ. ಈಗ ಸಾಹಿತ್ಯದ ವಲಯಕ್ಕೆ ಬಂದಿದ್ನಲ್ಲ. ಹಾಗಾಗಿ ಮದಕರಿ ನಾಯಕನ ಬಗ್ಗೆ ಬರಿಬೇಕು ಅಂತ ನನಗೂ ಆಸೆ ಇತ್ತು. ಮುಖ್ಯವಾಗಿ ನನಗೆ ಕೋಟೆ ಹೊಸದೇನೂ ಆಗಿರ್ಲಿಲ್ಲ. ದಿನಾ ಬೆಳಿಗ್ಗೆ ಎದ್ರೆ ಹೋಗಿ ಗೋಪಾಲಸ್ವಾಮಿ ಹೊಂಡದಲ್ಲಿ ಬಿದ್ದು ಸ್ನಾನ ಮಾಡಿ ಆಮೇಲ್ ಕಾಲೇಜಿಗೆ ಹೋಗ್ತಿದ್ದಿದ್ದು ನಾನು. ಮನೇಲಿ ಸ್ನಾನ ಮಾಡಿದ್ದು ನೆನಪೇ ಇಲ್ಲ ನನಗೆ. ಹಾಗಾಗಿ ಕೋಟೆಯ ಇಂಚಿಂಚೂ ನನಗ್ ಗೊತ್ತಿತ್ತು. ಜೊತೆಗೆ ಇತಿಹಾಸ ಓದ್ಕೊಂಡ್ ರೆಡಿ ಆಗಿದ್ದೆ. ಸರಿ ಬರೆಯೋಕ್ ಶುರು ಮಾಡೇ ಬಿಟ್ಟೆ. ಆಗ ಇಲ್ಲಿನ ದೊಡ್ಡದೊಡ್ಡವರಿಂದ ಹೇಳಿಸಿದ್ರು ಕಾದಂಬರಿ ಬರಿಬಾರ್ದು ಅಂತ. “ಏಯ್ ನೀನ್ ಯಾವನೊ ಮದಕರಿ ನಾಯಕ್ರು ಬಗ್ಗೆ ಬರೆಯಕ್ಕೆ? ನಿನಗೇನ್ ಬರುತ್ತೆ ಬರೆಯಕ್ಕೆ? ನಿಲ್ಸು ಸಾಕು ತರಾಸು ಅವರು ಬರಿತಾರೆ”ಅಂತ ಕೆಲವರು ಬೆದರಿಕೆ ಹಾಕಿದ್ರು. ಈ ಕಡೆ ನಮ್ಮುಡುಗ್ರು “ಬರೆಯೊ ಲೇಯ್ ಅದೇನ್ ಮಾಡ್ತಾರೆ ನೋಡಣ” ಅಂದ್ರು. ವಯಸ್ಸು ನಮ್ದು. ಸರಿ ನಾನು ಬರೆದೇಬಿಟ್ಟೆ. ಅದು ಮೊದ್ಲು ಬಿಡುಗಡೆ ಆಯ್ತು. ಇವರು ನಾನು ಕಾದಂಬರಿ ಬರೆದ ಒಂದು ವರ್ಷದ ನಂತರ ‘ದುರ್ಗಾಸ್ತಮಾನ’ ಬರೆದ್ರು. ನೋಡಿ ಆ ಕಾದಂಬರಿ ಬಿಡುಗಡೆಗೆ ಒಂದು 20 ಸಾವಿರ ಜನ ಉರಿಬಿಸಿಲಲ್ಲಿ ಕೋಟೆ ಮೇಲ್ ಸೇರಿದ್ರು! ಇಲ್ಲಿ ಒಂದು ಚಿಕ್ಕ ಫ್ಲಾಷ್‍ಬ್ಯಾಕ್ ಹೇಳ್ಬಿಡ್ತೀನಿ, ಆಗ ಏನಾಗಿತ್ತು ಅಂದ್ರೆ ನಮ್ ದೊಡ್ಡರಂಗೇಗೌಡ್ರು ಮೂಲಕ ನಮ್ಮ ಬಂಗಾರದ ಮನುಷ್ಯ ಸಿದ್ಧಲಿಂಗಯ್ಯನವರು ನನ್ನ ಕರೆಸ್ಕೊಂಡ್ರು. ವೇಣು ಅವರ ಕತೆ, ಕಾದಂಬರಿ ಯಾವ್ದಾದ್ರೂ ಸಿನಿಮಾ ಮಾಡಬಹುದ ನೋಡೋಣ ಅಂತ. ದೊಡ್ಡರಂಗೇಗೌಡ್ರು ಟೆಲಿಗ್ರಾಂ ಕೊಟ್ಟಿದ್ರು “ಸಿದ್ಧಲಿಂಗಯ್ಯ ವಾಂಟ್ಸ್ ಟು ಸೀ ಯು. ಸ್ಟಾರ್ಟ್ ಇಮ್ಮಿಡಿಯಟ್ಲಿ” ಅಂತ. ಸರಿ ನನಗೆ ಬೆಂಗಳೂರಿಗ್ ಹೋಗಕ್ಕೂ ದುಡ್ಡಿಲ್ಲ. ಎಂಥ ಪರಿಸ್ಥಿತಿ ನೋಡಿ ನಂದು. ಕನ್ನಡಪ್ರಭ, ಪ್ರಜಾವಾಣ ನಲ್ಲಿ ಕತೆ ಬಂದರೆ ಆ ಪತ್ರಿಕೆ ತಗೋಳ್ಳಕ್ ದುಡ್ಡಿಲ್ಲ ನಂಗೆ. ಕಟಿಂಗ್ ಶಾಪ್‍ಗೆ ಹೋಗಿ ಅಲ್ ಪೇಪರ್ ಬಂದಿರುತ್ತಲ್ಲ ಅದನ್ನ ನೋಡಿ “ಇದನ್ನ ಹಾಳ್ ಮಾಡ್ಬೇಡಪ್ಪ ಇಟ್ಟಿರು ಸಾಯಂಕಾಲ ಬರ್ತೀನಿ” ಅಂತ ಹೇಳಿಟ್ಟು ಸಂಜೆ ರಿಕ್ವೆಸ್ಟ್ ಮಾಡಿ ತಗೊಂಡ್ ಹೋಗಿ ಓದ್ತಿದ್ದೆ. ಇನ್ ಬೆಂಗಳೂರಿಗ್ ಹೋಗೋದ್ ಹೆಂಗೆ? ಸರಿ ಹೇಗೊ ಸಾಲ ಮಾಡ್ಕೊಂಡ್ ಹೋದೆ. ದೊಡ್ಡರಂಗೇಗೌಡ್ರು ಕರ್ಕೊಂಡ್ ಹೋದ್ರು ಸಿದ್ಧಲಿಂಗಯ್ಯನವರ ಹತ್ರ.

ಸುಮಾರು ಕತೆಗಳನ್ನ ಕೇಳಿದ್ರು. ಎಲ್ಲವನ್ನೂ ಇಷ್ಟಪಟ್ರು. ಆದ್ರೆ “ಯಾವ್ದೂ ಸಿನಿಮಾ ಮಾಡೋದಿಕ್ಕೆ ಸೂಟ್ ಆಗ್ತಿಲ್ಲ” ಅಂದ್ರು. ಆಮೇಲೆ ಪರಾಜಿತ ಕತೆ ಹೇಳ್ತೀನಿ ಅಂತ ನಾನು. ಅವರ ಅಸಿಸ್ಟೆಂಟ್ ಒಬ್ಬರು ಇದ್ರು ವೈದಿ ಅಂತ, ಅವರು “ಏಯ್ ಬೇಡಣ್ಣ ಅದು. ಸಸ್ಪೆನ್ಸ್ ಕತೆ ಅದು. ನಿಂಗಾಗಲ್ಲ” ಅಂದ್ರು. ಸರಿ ಸಿದ್ಧಲಿಂಗಯ್ಯನವರಿಗೆ ವೈದಿ ಹೇಳದ್ಮೇಲೆ ಮುಗಿದೇ ಹೋಯ್ತು. “ಬೇಡ ಬಿಡು ಬೇರೆ ಹೇಳು” ಅಂದ್ರು. ಬೇರೆ ಒಂದಷ್ಟು ಹೇಳ್ದೆ. ಸರಿ “ಮದಕರಿ ನಾಯಕ ಬರೆದಿದ್ದೀಯಂತೆ. ಅದನ್ನ ಹೇಳು” ಅಂದರು. ನನಗೆ ಅದನ್ನ ಹೇಳಕ್ಕೆ ಇಷ್ಟಾನೇ ಇಲ್ಲ. ಯಾಕಂದ್ರೆ ಅಷ್ಟು ಲಕ್ಸುರಿ ಸಿನಿಮಾ ಅದನ್ನೆಲ್ಲಿ ಸಿನಿಮಾ ಮಾಡಕ್ಕಾಗುತ್ತೆ ಅಂತ ಆಸಕ್ತಿ ಇಲ್ದೇ ಹೋದ್ರೂ ಹೇಳ್ದೆ. ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಹೇಳ್ದೆ. ವಿತ್ ಡೈಲಾಗ್ಸ್! ಕತೆ ಕೇಳಿ ನಕ್ಕು, ಅತ್ತು ಖುಷಿಪಟ್ರು ಸಿದ್ಧಲಿಂಗಯ್ಯ. ಎಷ್ಟೋ ಕಡೆ ಅತ್ತುಬಿಟ್ರು. ತುಂಬಾ ಭಾವನಾತ್ಮಕ ಜೀವಿ ಸಿದ್ಧಲಿಂಗಯ್ಯ. “ಏಯ್ ಇದನ್ನ ತಕ್ಷಣ ಸಿನಿಮಾ ಮಾಡಿಬಿಡಬೇಕು ಕಣೊ ವೈದಿ. ನಾಳೇನೇ ಅಗ್ರಿಮೆಂಟ್ ಮಾಡ್ಕೊಂಡ್ ಬಿಡಬೇಕು” ಅಂದ್ರು. ನನಗ್ ಶಾಕು! ಸಿದ್ಧಲಿಂಗಯ್ಯ ಸಿನಿಮಾ ಮಾಡ್ತಾರೆ ಅಂದ್ರೆ ಯಾರ್ ಕೊಡಲ್ಲ? ಅವರ ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು ಎಲ್ಲಾ ಟೆಂಟ್‍ನಾಗೆ ಬಟ್ಟೆ ಹರ್ಕೊಂಡ್ ನೋಡ್ದೋರು ನಾವು. ಸರಿ 500 ರೂಪಾಯಿ ಅಡ್ವಾನ್ಸ್ ಕೊಟ್ರು. ಪೇಪರ್‍ನಲ್ಲಿ ಅನೌನ್ಸ್‍ಮೆಂಟು ಹಾಕ್‍ಬಿಟ್ರು “ಈ ತರ ಸಿದ್ಧಲಿಂಗಯ್ಯ ಮದಕರಿ ನಾಯಕ ಸಿನಿಮಾ ಮಾಡ್ತಾರೆ. ಒಬ್ಬ ಹೊಸ ಲೇಖಕ ಪರಿಚಯ ಆಗ್ತಿದ್ದಾನೆ” ಅಂತ. ಇಲ್ಲಿ ದುರ್ಗದಲ್ಲಿ ದೊಡ್ಡ ಕ್ರೇಝ್ ಆಗೋಯ್ತು. ಎಲ್ರೂ ನನ್ ಕೇಳೋರೇ ಇದರ ಬಗ್ಗೆ. ಮೊದ್ಲೇ ಕಾದಂಬರಿ ಬರಿಬಾರ್ದು ಅಂತ ಬೆದರಿಕೆ ಬೇರೆ ಹಾಕಿದ್ರು. ಹೊಡೆಯೋಕ್ ಬಂದಿದ್ದರು ಮನೆಗ್ ನುಗ್ಗಿ ಆಗ. ಅಷ್ಟೊಂದ್ ಭಯ, ಭಕ್ತಿ, ಗೌರವ ಇತ್ತು ತರಾಸು ಅವರ ಬಗ್ಗೆ ಆಗ. ಸರಿ ಅವತ್ತು ರಾತ್ರಿ ಊರಿಗ್ ಹೊರಡ್ತೀನಿ ಅಂತ ಹೊರಡ್ತಿದ್ದೆ. ಆಗ ಸಿದ್ಧಲಿಂಗಯ್ಯನವರು “ಅದೇನೊ ಪರಾಜಿತ ಪರಾಜಿತ ಅಂತೀಯಲ್ಲಪ್ಪ ಹೇಳ್‍ಬಿಟ್ ಊರಿಗ್ ಹೋಗ್‍ಬಿಡು ಅದನ್ನ” ಅಂದ್ರು. ವೈದಿ “ಅಣ್ಣ ಅದು ಸುಮ್ನೆ ಟೈಮ್ ವೇಸ್ಟು” ಅಂದ್ರು. “ಇರ್ಲಿ ಇರೊ ಕೇಳ್‍ಬಿಡಣ” ಅಂತ ಹೇಳಿ ಹೇಳಪ್ಪ ಅಂದ್ರು. ಕತೆ ಹೇಳ್ದೆ. ಆಗ ತುಂಬಾ ಚೆನ್ನಾಗ್ ಕತೆ ಹೇಳ್ತಿದ್ದೆ. ಈಗಲೂ ಹೇಳ್ತೀನಿ ಅಂತ ಅಂದ್ಕೊಂಡಿದ್ದೀನಿ” ನಕ್ಕರು ವೇಣು ಸರ್,

“ಕತೆ ಕೇಳಿ ರೋಮಾಂಚಿತರಾಗಿಬಿಟ್ಟರು ಸಿದ್ಧಲಿಂಗಯ್ಯ. ಎಷ್ಟರ ಮಟ್ಟಿಗೆ ಅಂದ್ರೆ ವೈದಿಗೆ ಹೊಡಿಯಕ್ ಹೋಗ್ಬುಟ್ರು. “ಅಯ್ಯೋ ನಿನ್ನ ಲೇಯ್. ನನ್ನ ಕೈಲಿ ಈ ಸಬ್ಜೆಕ್ಟ್ ಮಾಡಕ್ಕಾಗಲ್ವೇನೊ? ನಾನ್ ಕಾಲೇಜ್ ಓದದೇ ಇದ್ರೇನಂತೆ? ವೇಣು ಓದಿದಾನಲ್ಲ ಕಾಲೇಜು. ಅವನನ್ನಿಟ್ಕೊಂಡು ಸಿನಿಮಾ ಮಾಡ್ತೀನಿ ನಾನು. ಸರಿ ಹೋಗಿ ಆ ಟೈಪ್ ಮಾಡೋರ್ನೆಲ್ಲಾ ಕರ್ಕೊಂಡ್ ಬಾ” ಅಂತೇಳಿ ಕಳಿಸಿ ಅಗ್ರಿಮೆಂಟ್ ಮಾಡ್ಸಿ 500 ರೂಪಾಯಿ ಅಡ್ವಾನ್ಸ್ ಕೊಟ್ರು. ಒಟ್ಟು 5000 ಮಾತಾಡಿದ್ರು. ಅದನ್ನೂ ಅನೌನ್ಸ್‍ಮೆಂಟ್ ಕೊಟ್ರು. ದುರ್ಗದಲ್ಲಿ ಮತ್ತೆ ಸಂಚಲನ ಉಂಟಾಯ್ತು.
ಸ್ಕ್ರೀನ್‍ಪ್ಲೇ ಎಲ್ಲಾ ಜೊತೆಗೆ ಕುಂಡ್ರುಸ್ಕೊಂಡ್ ಮಾಡಿದ್ರು. “ನೀನೇ ಡೈಲಾಗ್ ಬರ್ದುಬಿಡಪ್ಪ. ಕಾದಂಬರೀಲಿ ಒಳ್ಳೆ ಡೈಲಾಗ್ ಬರೆದಿದ್ದೀಯ” ಅಂದ್ರು. ನನಗೆ ಒಂದ್ ಆಸೆ, ನನ್ ಕತೆಗೆ ಉದಯಶಂಕರ್ ಡೈಲಾಗ್ ಬರಿಬೇಕು ಅಂತ. ಅದನ್ನ ಸಿದ್ಧಲಿಂಯ್ಯನವರಿಗೆ ಹೇಳ್ದೆ. “ರೀ ನಾವು ಅವರತ್ರಾನೇ ಕಣ ್ರ ಬರೆಸೋದು. ನೀನು ಒಂದ್ಸಲ ಟ್ರೈ ಮಾಡಪ್ಪ” ಅಂದ್ರು. ಸರಿ ದೊಡ್ಡವರು ಹೇಳ್ತಾರಲ್ಲ ಅಂತ ಬರ್ಕೊಂಡ್ ಹೋದೆ. ತುಂಬಾ ತಿದ್ದಿಸಿದರು “ಇಲ್ಲಿ ಕಾಮಿಡಿ ಇರಬೇಕು, ಇಲ್ಲಿ ಅಳು ಬರಬೇಕು, ಇಲ್ಲಿ ಚಪ್ಪಾಳೆ ಬೀಳಬೇಕು” ಅಂತ ಹೇಳಿ ಬರೆಸಿದ್ರು. ಖುಷಿ ಆಯ್ತು. ಸರಿ ಆ ಪಿಚ್ಚರ್ ಶೂಟಿಂಗ್ ಚಿಕ್ಕಮಗಳೂರಿನಲ್ಲಿ ಇಟ್ಕೊಂಡಿದ್ರು. ಹಾಗಾಗಿ ನನ್ನ ಪುಸ್ತಕ ಮದಕರಿ ನಾಯಕ ಬಿಡುಗಡೆಗೂ ಬಂದ್ರು. ಪುಸ್ತಕ ಬರೆಯೋಕ್ ಮುಂಚೆ ಯಾರ್ಯಾರ್ ಅಗೆನೆಸ್ಟ್ ಇದ್ರಲ್ಲ ಅವ್ರೆಲ್ಲಾ ಸಾಥ್ ಕೊಟ್ರು ಬಿಡುಗಡೆಗೆ. 20 ಸಾವಿರ ಜನ ಸೇರಿದ್ರು ನೋಡಿ ಕೋಟೆ ಮೇಲೆ. ನನಗೂ ಆಶ್ಚರ್ಯ. ಡಿಸಿಯವರು ಪರ್ಮಿಶಷನ್ ಕೇಳಕ್ ಹೋದಾಗ ಸೇರಿದ್ರು “ಯಾರ್ ಬರ್ತಾರ್ ಅಲ್ಲಿಗೆ?” ಅಂತ. ನಾನು “ನನ್ನ ಸ್ನೇಹಿತರು ಒಂದ್ 20 ಜನ ಬರ್ತಾರೆ ಸಾರ್” ಅಂದೆ. “ರೀ ಒಂದ್ 200 ಜನ ಆದ್ರೂ ಸೇರಿಸ್ರಿ. ಇಲ್ದಿದ್ರೆ ಚೆನ್ನಾಗಿರಲ್ಲ” ಅಂದ್ರು. ನೋಡಣ ಅಂತ ನಾನವತ್ತು ನನ್ ಸ್ನೇಹಿತ್ರು ಜೊತೆ ಸೇರಿ ಒಂದು ಹಂಡೆ ಪಾನಕ, ಕೋಸಂಬರಿ ಎಲ್ಲಾ ಮಾಡ್ಸಿದ್ದೆ. ಮಧ್ಯಾಹ್ನ 2 ಗಂಟೆ ಟೈಮಲ್ಲಿ ಡಿಸಿಯವರು ಮೇಲ್ಗಡೆ ಹೋಗಿ ನೋಡ್ಕೊಂಡ್ ಬಂದೋರು ನಮ್ ಹಂಡೆಗಳನ್ನ ನೋಡಿ “ಇವೆಲ್ಲಾ ಮೇಲಕ್ಕೆ ಬೇಡ. ಸಾಯಂಕಾಲ ನಾವೇ ಬಂದು ತಿನ್ನಣ. ಇಲ್ಲೇ ಬಿಟ್ ಬನ್ನಿ” ಅಂದ್ರು. ನಾನು “ಪರ್ವಾಗಿಲ್ಲ ಸಾರ್ ನಮ್ಮುಡುಗ್ರು ಇದಾರೆ ಹೊತ್ಕೊಂಡ್ ಬಂದ್‍ಬಿಡ್ತಾರೆ” ಅಂದ್ರೆ ಅವರು “ಬೇಡ ಬೇಡ. ಮೇಲ್ಗಡೆ ತುಂಬಾ ಜನ ಸೇರಿದ್ದಾರೆ. ಇದೆಲ್ಲಾ ಅಲ್ಲಿ ಯಾವ ಮೂಲೆಗೂ ಎಟುಕಲ್ಲ” ಅಂದರು. “ಅಂದ್ರೆ ಎಷ್ಟ್ ಜನ ಸೇರಿದ್ದಾರೆ?” ಅಂದೆ. “ಬಂದ್ ನೋಡಿ” ಅಂದ್ರು. ಅಷ್ಟರಲ್ಲಿ ಸಿದ್ಧಲಿಂಗಯ್ಯನೋರು ಕೂಡ ಬಂದ್ರು. ಮೆರವಣ ಗೆ ಮಾಡ್ಕೊಂಡ್ ಕರ್ಕೊಂಡ್ ಹೋದ್ರು. ಹೋಗ್ ನೋಡಿದ್ರೆ 20 ಸಾವಿರಕ್ಕೂ ಹೆಚ್ಚು ಜನ ಸೇರ್‍ಬಿಟ್ಟಿದ್ರು. ಸಿದ್ಧಲಿಂಗಯ್ಯನೋರು “ಏನಪ್ಪ ಇಷ್ಟೊಂದ್ ಜನ. ಹೀಗೆ ಅಂತ ಗೊತ್ತಾಗಿದ್ರೆ ಚಿಟ್ಟಿಬಾಬುನ ಕರ್ಕೊಂಡ್ ಬಂದ್‍ಬಿಡ್ತಿದ್ದೆ ಇದೆಲ್ಲಾ ಶೂಟ್ ಮಾಡೋಕೆ ಅಂದ್ರು. ಭರ್ಜರಿಯಾಗೇ ಬಿಡುಗಡೆ ಆಯ್ತು.ತುಂಬಾ ಒಳ್ಳೆ ವಿಮರ್ಶೆ ಬಂತು. ಕನ್ನಡಪ್ರಭ ಕೇಶವಾಚಾರಿ ಅಂತ ಒಬ್ರು ಚೆನ್ನಾಗ್ ಬರೆದ್ರು. ಮುಖ್ಯವಾಗಿ ಪ್ರಜಾವಾಣ ಲಿ ಟಿ.ಪಿ ಅಶೋಕ, ಅವರು ಒಳ್ಳೆ ಮಾತು ಬರೀತಿದ್ದದ್ದೇ ಅಪರೂಪ, ಅವರು ತುಂಬಾ ಒಳ್ಳೆ ವಿಮರ್ಶೆ ಬರೆದ್ರು. ಇದು ತರಾಸು ಅವರಿಗೆ ಕಷ್ಟ ಆಯ್ತು ಅನ್ಸುತ್ತೆ “ಇದು ಇತಿಹಾಸದ ವಿಕೃತ ರೂಪ” ಅಂತ ನಾ ಪ್ರಭಾಕರ್ ಹತ್ತಿರ ಬರೆಸಿದ್ರು. ಐದಾರು ವಾರ ಕಾಂಟ್ರವರ್ಸಿ ಆಯ್ತು. ನಾನು ಎಲ್ಲೆಲ್ಲಿಂದ ಆಕರಗಳನ್ನ ತಗೊಂಡಿದ್ದೀನಿ ಅಂತ ಬರೆದೆ. ಕಳ್ಳಿ ನರಸಪ್ಪನ್ನ ನಾನು ಕೆಟ್ಟೋನ್ ಮಾಡಿದ್ದೆ, ಅವರು ಒಳ್ಳೆಯವನು ಅಂತ ಮಾಡಿದ್ರು. ಕಳ್ಳಿ ನರಸಪ್ಪ ಹೆಂಗ್ ಕೆಟ್ಟೋನು? ಅಂತ ಅವರು ಕೇಳಿದ್ರು. ತಿ.ತಾ ಶರ್ಮ ಅವರ ಒಂದು ಪುಸ್ತಕದಲ್ಲಿ ಹೈದರಾಲಿಯ ಕಾಲದಲ್ಲಿ ದುರ್ಗದ ಪತನ ಆದ್ಮೇಲೆ ಕಳ್ಳಿ ನರಸಪ್ಪನಿಗೆ ಒಂದು ಸ್ಥಾನ ಹೈದರಾಲಿ ಸಂಸ್ಥಾನದಲ್ಲಿ ಕೊಟ್ಟ ಅಂತ ಅಷ್ಟೇ ಇದೆ. “ಅದಷ್ಟೇ ಇಟ್ಕೊಂಡು ಹೇಗೆ ಅವನು ಕೆಟ್ಟವನು ಅಂತ ಹೇಳ್ತೀಯ?” ಅಂತ ಕೇಳಿದ್ರು. ನಾನು ಹೇಳ್ದೆ ಅದಕ್ಕೆ ಬೇರೆ ಯಾವ್ದೂ ಸಕಾರಣ ಬೇಕಿಲ್ಲ. ಚಿತ್ರದುರ್ಗದ ಪತನ ಆದ್ಮೇಲೆ ಹೈದರಾಲಿ ಕಳ್ಳಿ ನರಸಪ್ಪನಿಗೆ ಅಧಿಕಾರ ಯಾಕ್ ಕೊಟ್ಟ? ಅವನೇನೊ ಆಮಿಷ ಒಡ್ಡಿರ್ತಾನೆ, ಇವನೇನೊ ಮೋಸ ಮಾಡಿರ್ತಾನಲ್ವ? ಅಂತ ಅವರ ಮಾತು ಅವರಿಗೆ ತಿರುಗಿಸಿಬಿಟ್ಟೆ. ಆ ಕಳ್ಳಿ ನರಸಪ್ಪ ಒಬ್ಬ ಬ್ರಾಹ್ಮಣ. ಆಗೆಲ್ಲಾ ಇವರೇ ಮಂತ್ರಿಗಳಾಗ್ತಿದ್ದಿದ್ದು. ಯಾವನೇ ರಾಜ ಆದ್ರೂ ಬ್ರಾಹ್ಮಣರೇ ಮಂತ್ರಿಗಳಾಗ್ತಿದ್ದೋರು. ಅವರು “ಕಳ್ಳಿ ನರಸಪ್ಪ ಮಹಾನ್ ಪುರುಷೋತ್ತಮ. ಅವನ ಮಾತು ಕೇಳ್ದೇ ಇದ್ದಿದ್ದಕ್ಕೆ ಮದಕರಿ ನಾಯಕ ಹಾಳಾಗೋದ” ಅಂತ ಬರೆದಿದ್ರು. ನಾನು ಇಲ್ಲ ಅವನು ಈ ತರ ಮೋಸಗಾರ ಅಂತ ಬರೆದಿದ್ದೆ. ಆದ್ರೆ ಯಾವ್ದೊ ಒಂದ್ ಜಾತಿನ ದೂಷಿಸೋದಲ್ಲ. ಎಲ್ಲಾ ಜಾತೀಲೂ ಒಳ್ಳೇವ್ರು ಇದಾರೆ ಕೆಟ್ಟೋರು ಇದಾರೆ. ಆ ಕಳ್ಳಿ ನರಸಪ್ಪನ ಅಸಲಿ ಮುಖ ಬಯಲು ಮಾಡಿದೋರು ನಮ್ ದುರ್ಗದವರೆ ಆದ ಹುಲ್ಲೂರು ಶ್ರೀನಿವಾಸ ಜೋಯಿಸರು, ಎಂ.ಎಸ್ ಪುಟ್ಟಣ್ಣ ಮೊದಲಾದವರು. ಅವರ ಪುಸ್ತಕಗಳೇ ನನಗೆ ಆಧಾರ. ಸರಿ ತುಂಬಾ ಕಾಂಟ್ರವರ್ಸಿ ಆಯ್ತು, ಅವಮಾನ ಆಯ್ತು, ಆದ್ರೂ ಬಿಡುಗಡೆ ಆಯ್ತು. ಬಿಡುಗಡೆ ಆದಾಗ್ಲೇ 800 ಪ್ರತಿ ಖರ್ಚಾಗ್ ಹೋಯ್ತು. ಎರಡ್ನೇ ಸಲ ಪ್ರಿಂಟ್ ಆದ್ರೆ ನನಗ್ ಇವ್ರೆಲ್ಲಾ ಏನೇನ್ ಕಾಟ ಕೊಟ್ರು ಅಂತ ಬರಿಬೇಕು ಅಂದ್ಕೊಂಡಿದ್ದೆ. ಬಹಳ ಬೇಗ ಎರಡ್ನೇ ಪ್ರಿಂಟ್ ಆಯ್ತು. ಬರೆದೆ. ಒಬ್ಬರು ಹಿರಿಯ ಸಾಹಿತಿಗಳು ಹಿಂಗ್ ಮಾಡಿದ್ರು ಅಂತ. ಆಮೇಲೆ ಓಬವ್ವನಿಗೆ ಅವಮಾನ ಆಗಿದೆ ಅಂತ ಮೈಸೂರಿನಿಂದ ಎ.ಡಿ ಕೃಷ್ಣಯ್ಯ ಅಂತ ಒಬ್ರು ಬಂದು ತುಂಬಾ ಗಲಾಟೆ ಮಾಡಿದ್ರು. “ನನ್ ತಾಯಿಗೆ ಅವಮಾನ ಆಗಿದೆ ಹಾಗೆ ಹೀಗೆ. ಓಬವ್ವನ ಮೇಲೆ ರೇಪ್ ಪ್ರಯತ್ನ ನಡೆದಿತ್ತು ಅಂತೆಲ್ಲಾ ಬರೆದಿದ್ದೀಯ. ಅದೆಲ್ಲಾ ತೆಗೆದು ಹಾಕು” ಅಂತ ಜೋರ್ ಮಾಡಿದ್ರು. ನಾನು ಕೇರ್ ಮಾಡ್ತಿರ್ಲಿಲ್ಲ ಬಿಡಿ. “ನೋಡಿ ಸ್ವಾಮಿ ಒಬವ್ವ ಇದ್ದಳು ಅನ್ನೋದಕ್ಕೆ ಯಾವ ಐತಿಹಾಸಿಕ ಸಾಕ್ಷಾಧಾರಾನೂ ಇಲ್ಲ. ಇರೋವೆಲ್ಲಾ ಕಲ್ಪನೆಗಳು. ಲಾಜಿಕ್ ಇಟ್ಕೊಂಡ್ ಯೋಚ್ನೆ ಮಾಡಿದ್ರೆ ಗಂಡನಿಗೆ ಊಟಕ್ಕಿಟ್ಟು ನೀರು ತರೋಕ್ ಹೋಗಿದ್ದು, ಶತ್ರುಗಳ ತಲೆ ಒಡೆದಿದ್ದು ಇವೆಕ್ಕೆಲ್ಲಾ ಯಾವ ಆಧಾರಾನೂ ಇಲ್ಲ. ಹಂಗಾಗಿ ತೆಗೆಯೋಲ್ಲ” ಅಂದೆ. ಕೋರ್ಟ್‍ಗೆ ಹೋಗ್ತೀನಿ ಅಂದ್ರು. “ಕೋರ್ಟಲ್ಲಿ ಒಬವ್ವ ಅನ್ನೊ ವ್ಯಕ್ತೀನೇ ಇರಲಿಲ್ಲ. ಇವಲ್ಲಾ ಕಟ್ಟುಕತೆ” ಅಂತ ಸಾಬೀತು ಮಾಡ್ತೀನಿ” ಅಂದೆ. ಅತ್ತುಕೊಂಡು ಬೇಡ್ಕೊಂಡ್ರು “ಆ ಅತ್ಯಾಚಾರದ ಸೀನ್ ತೆಗೆದುಬಿಡು” ಅಂತ. ಮುಂದಿನ ಸಲ ಪ್ರಿಂಟ್‍ಗೆ ಹೋದಾಗ ಒಂದ್ ಪೇಜ್ ತೆಗೆದಿದ್ದೆ. ಏನ್ ಹೇಳಕ್ ಬಂದೆ ಅಂದ್ರೆ ಇತಿಹಾಸ ಬೇರೆ ಕಾದಂಬರಿ ಬೇರೆ. ಕಾದಂಬರಿಗೆ ಸ್ವಲ್ಪ ಕಲ್ಪನೆ ಸೇರಿಸ್ಬೇಕಾಗುತ್ತೆ. ಹೀಗೆ ಸುಮಾರು ಕಾಂಟ್ರಾವರ್ಸಿಗಳಾದ್ವು. ಬಟ್ ನನಗೆ ಸಿನಿಮಾಗೆ ಎಂಟ್ರಿ ಸಿಕ್ಕಿಬಿಟ್ಟಿತ್ತು” ತಮ್ಮ ನೆನಪುಗಳಿಗೆ ಅಲ್ಪವಿರಾಮ ಹಾಕಿ ಮತ್ತೆ ಹಿಂದಿನ ಖುರ್ಚಿಗೆ ಒರಗಿದರು ವೇಣು ಸರ್. “ವಾವ್ ವಾಟ್ ಎ ಜರ್ನಿ ಸರ್ ನಿಮ್ದು! “ಆಮೇಲೆ?” ಕೇಳಿದೆ. ಡಾ. ರಾಜ್ ಅವರ ತಮ್ಮ ವರದಪ್ಪನವರ ಜೊತೆಗಿನ ಒಡನಾಟದ ನೆನಪುಗಳನ್ನು ಹೊಚ್ಚ ಹೊಸ ಮೂಡ್‍ನಲ್ಲಿ ಬಿಚ್ಚಿಡತೊಡಗಿದರು.


364 views