EP9: ವರದಣ್ಣ ಎಂಬ ಸುಪ್ರೀಂ ಕೋರ್ಟ್ ಜಡ್ಜ್! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ

Updated: Jan 24

“ಯಾವಾಗ ಪರಾಜಿತ ಸಿನಿಮಾಗೆ ಬರೆದುಕೊಟ್ಟನೊ ಆಗ ವರದಪ್ಪ ಅಂದರೆ ರಾಜ್‍ಕುಮಾರ್ ತಮ್ಮ, ಅವರು ಕರೆಸ್ಕೊಂಡರು. ಅಷ್ಟೊತ್ತಿಗಾಗಲೇ ಭೂತಯ್ಯನ ಮಗ ಅಯ್ಯು ಮಾಡಿದ್ರು, ಹೇಮಾವತಿ ಮಾಡಿದ್ರು. ಈಗ ‘ಪ್ರಾಯ ಪ್ರಾಯ ಪ್ರಾಯ’ ಅಂತ ಸಿನಿಮಾ ಮಾಡೋಕೆ ಹೊರಟಿದ್ರು ವರದಪ್ಪ ಮತ್ತೆ ಅವರ ಪಾರ್ಟನರ್ ಚಂದೂಲಾಲ್ ಜೈನ್. ನಾಗಾಭರಣ ಅದಕ್ಕೆ ಡೈರೆಕ್ಟ್ರು. ಕಥೆ ಚೆನ್ನಾಗಿತ್ತು. ಆದರೆ ಅವರಿಗೆ ಇನ್ನು ಸ್ವಲ್ಪ ಕಾಮಿಡಿ ಬೇಕು ಅನ್ನಿಸಿತ್ತು.





ನೋಡಿ ಆವಾಗ್ಲೇ ಭರಣ ಎಂಥ ಒಳ್ಳೆ ಕತೆ ಮಾಡಿದ್ರು ಅಂದ್ರೆ ಆ ಸಿನಿಮಾದಲ್ಲಿ ಅಪ್ಪ ಅಮ್ಮ ಯಾರೂ ಇರೋದೇ ಇಲ್ಲ. ಭರಣ ಬರೇ ಕಾಲೇಜು ಮತ್ತೆ ಹಾಸ್ಟೆಲ್ಲು ಎರಡನ್ನೇ ಇಟ್ಕೊಂಡು ಕ್ರಿಯೇಟ್ ಮಾಡಿದ್ದಾರೆ ಸಬ್ಜೆಕ್ಟು. ನಮ್ ಸಿದ್ಧಲಿಂಗಯ್ಯನವರು “ನೋಡ್ರಿ ಆ ವೇಣು ಅನ್ನೋನು ಚೆನ್ನಾಗ್ ಬರೀತಾನೆ. ಒಂದ್ಸಲ ಕತೆ ಹೇಳ್ ನೋಡ್ರಿ” ಅಂತ ಹೇಳಿ ನನ್ನನ್ನ ವರದಪ್ಪನೋರ ಹತ್ರ ಕಳಿಸಿದ್ರು. ಹೋದೆ, ಕತೆ ಹೇಳಿದ್ರು. ಪಾಪ ಭರನ ಫಸ್ಟ್ ಟೈಮ್ ಕಮರ್ಷಿಯಲ್ ಎಂಟ್ರಿ ಆ ಪಿಚ್ಚರ್ ಮೂಲಕ. ಅವರು “ರೀ ಕತೆ ಚೆನ್ನಾಗಿದೆ ಅಂತ ಹೇಳ್ರಿ” ಅನ್ನೋರು. ಕತೆ ಚೆನ್ನಾಗೇ ಇತ್ತು. ವರದಣ್ಣೋರಿಗೆ ಹೇಳಿದೆ “ಚೆನ್ನಾಗಿದೆ ಸಾರ್ ಕತೆ” ಅಂತ. “ಚೆನ್ನಾಗಿದ್ರೆ? ಮಾಡ್ಬೇಕಲ್ರಿ ಸಿನಿಮಾನ? ಕಾಮಿಡಿ ಬೇಕಪ್ಪ. ಏನ್ ಮಾಡೋದು?” ಅಂತ್ ಕೇಳಿದ್ರು. “ಆಯ್ತ್ ಸಾರ್ ಬರ್ಕೊಡ್ತೀನಿ” ಅಂದೆ. “ಸರಿ ಇಲ್ಲೇ ಸ್ವಲ್ಪ್ ದಿನ ಇದ್‍ಬಿಡಿ. ರೂಂ ಹಾಕ್‍ಕೊಡ್ತೀವಿ” ಅಂದ್ರು. ನನ್ನದೊಂದ್ ಕಂಡೀಷನ್ನು “ನಾನ್ ಮನೇಲ್ ಬರಿತೀನಿ. ಸೆಕೆಂಡ್ ಸಾಟರ್ಡೇ ಸಂಡೇ ಬಂದು ರೀಡಿಂಗ್ ಕೊಡ್ತೀನಿ. ಆ ಕಂಡೀಷನ್‍ಗೆ ಒಪ್ಕೊಂಡ್ರೆ ಮಾತ್ರ ಸಿನಿಮಾ ಮಾಡ್ತೀನಿ ಅಂದೆ. ಅದೇ ಕಂಡೀಷನ್ ಕೊನೆವರೆಗೂ ಉಳಿಸ್ಕೊಂಡೆ. ಅವರೂ ಅಷ್ಟೇ ಪ್ರೀತಿಯಿಂದ ನನ್ನ ಕರೆಸಿ ಕೆಲಸ ತಗೊಂಡ್ರು ಬಿಡಿ. ಯಾಕಂದ್ರೆ ನನ್ನ ಬಗ್ಗೆ ಭರವಸೆ ಇತ್ತು. ಆ ನಂಬಿಕೆ ಕೊನೆವರೆಗೂ ಉಳಿಸ್ಕೊಂಡಿದ್ದೀನಿ. ಅದೇ ನನ್ ಆಸ್ತಿ ಇವತ್ತಿಗೂ! ಸರಿ ಮನೆಗ್ ಬಂದು ಕೆಲಸ ಮುಗಿಸಿ ಬಂದು ಕೂತು ಬರೀತಿದ್ದೆ. ಸೆಕೆಂಡ್ ಸಾಟರ್ಡೇ ಸಂಡೇ ಬೆಂಗಳೂರಿಗ್ ಹೋಗಿ ರೀಡಿಂಗ್ ಕೊಡ್ತಿದ್ದೆ. ಸಿದ್ಧಲಿಂಗಯ್ಯನೋರು “ರೀ ವರದಣ್ಣನ್ನ ಒಪ್ಸೋದು ಬಹಳ ಕಷ್ಟ ಕಣ ್ರ. ಬಹಳ ಹುಶಾರಾಗಿರಿ. ಅಲ್ಲಿ ನಿಮ್ ಚೇಷ್ಟೆಗಳನ್ನೆಲ್ಲಾ ಮಾಡ್ಬೇಡ್ರಿ” ಅಂತ ಅಡ್ವೈಸ್ ಮಾಡಿದ್ರು. ಕಷ್ಟ ಆಯ್ತು ವರದಣ್ಣನ್ನ ಒಪ್ಸೋದು. ಒಂದೊಂದ್ ಸೀನ್‍ಗೆ ನಾಲ್ಕ್ ತರ ಕೇಳೋರು. ಎಷ್ಟೊ ಸಲ “ಇದಲ್ಲಪ್ಪ ನನ್ ತಲೇಲ್ ಇರೋದು. ಇನ್ನೂ ಬೇರೆ ಏನೋ ಬೇಕು” ಅನ್ನೋರು,“ಸಾರ್ ನಿಮ್ ತಲೇಲ್ ಇರೋದ್ ನನಗೆಂಗ್ ಗೊತ್ತಾಗುತ್ತೆ ಸಾರ್? ಒಂದ್ಕೆಲ್ಸ ಮಾಡಿ ನೀವೇ ಬರ್ದುಬಿಡಿ ಅತ್ಲಾಗೆ” ಅಂತಿದ್ದೆ ನಾನು. “ನಾನ್ ಬರೀವಂಗಿದ್ರೆ ನಿನ್ ಯಾಕಪ್ಪ ಕರೆಸ್ತಿದ್ದೆ? £ನಗ್ ಬರೆಯಕ್ ಬರಲ್ಲ. ಆದರೆ ನೀನ್ ಬರೆದಿದ್ದು ನನಗ್ ಹೇಳಿದ್ರೆ ಸರಿನ ಇಲ್ವ ಹೇಳೊ ಶಕ್ತಿ ಇದೆ” ಅನ್ನೋರು ಅವರು. ಇಷ್ಟ ಆಗ್ಬುಟ್ರೆ “ಇದು ಇದು ನಾನ್ ಅಂದ್ಕೊಂಡಿದ್ದಿದ್ದು” ಅಂತ ಬೆನ್ನುತಟ್ಟೋರು. ಹಿಂಗೆ ಆ ಪಿಚ್ಚರ್ರು ಕೂಡ ಚೆನ್ನಾಗ್ ಆಯ್ತು. ಡೈಲಾಗ್ ಬರೆದಿದ್ದು ಅವರಿಗೆ ಇಷ್ಟ ಆಯ್ತು. ಆಗ “ಅದ್ಯಾವ್ದ್ರಿ ಅದು ‘ಬೆತ್ತಲೆ ಸೇವೆ ಕತ್ತಲೆಯಲ್ಲಿ’ ಅಂತ ಬರುತ್ತಲ್ರಿ ಪೇಪರಲ್ಲಿ. ನಿಮ್ದೇನೇ ಸಬ್ಜೆಕ್ಟ್ ಅದು? ಅಂತ ಕೇಳಿದ್ರು. “ಹೌದು ಸಾರ್” ಅಂದೆ. “ದೊಡ್ಡ ದೊಡ್ಡ ಸ್ಟಾರ್ ಕಾಸ್ಟ್ ಅಲ್ಲಪ್ಪ ಅದ್ರಲ್ಲಿ. ಅನಂತನಾಗು, ಮಂಜುಳ, ಲೋಕೇಶು, ವಜ್ರಮುನಿ ಎಲ್ರೂ ಇದಾರಲ್ಲಪ್ಪ” ಅಂದರು ವರದಣ್ಣ. “ಹೂಂ ಸಾರ್ ಕೆ.ವಿ ಜಯರಾಂ ಡೈರೆಕ್ಟ್ರು. ಆದರೆ ಪಿಚ್ಚರ್ ನಿಂತೋಗಯ್ತೆ” ಅಂದೆ. ಆಗ ವರದಣ್ಣ “ಏಯ್ ಜೈನ್ ನೋಡಯ್ಯ ವೇಣು ಕತೆ ಅಂದ್ರೆ ಚೆನ್ನಾಗೇ ಇರುತ್ತೆ. ಅವನ್ದೇ ಡೈಲಾಗ್ ಬೇರೆ ಅಂತೆ. ಮಜಾ ಇರುತ್ತೆ. ಒಂದ್ಸಾರಿ ಕೇಳಿಬಿಡಣ್ವ?” ಅಂತ ಮಾತಾಡ್ಕೊಂಡು ನನಗೆ ಟೆಲೆಗ್ರಾಂ ಕೊಟ್ರು. ಸರಿ ನಾನ್ ಭಾನುವಾರ ಹೋದೆ. ಜಯರಾಂ ಕೂಡ ಇದ್ರು. ನಾನೇ ಕತೆ ನರೇಟ್ ಮಾಡ್ದೆ. ಅವರು ಕತೆ ಎಷ್ಟು ಎಂಜಾಯ್ ಮಾಡಿದ್ರು ಅಂದ್ರೆ ನಂದೊಂದ್ ಸ್ಟೈಲು ಆಯಾ ಕ್ಯಾರೆಕ್ಟ್ರುಗಳು ಆಯಾ ಪಾತ್ರಧಾರಿಗಳ ವಾಯ್ಸು, ಇಂಟೋನೇಷನ್‍ನಲ್ಲೇ ಹೇಳ್ತಿದ್ದೆ. ಹಾಗ್ ಹೇಳ್ತಿದ್ರೆ ಎಷ್ಟೊ ಡೈರೆಕ್ಟ್ರುಗಳು ಇಂತಿಂಥ ಪಾತ್ರಕ್ಕೆ ಇವರಿವರು ಅಂತ ನೋಟ್ಸ್ ಮಾಡಿಬಿಡೋರು! ಮುಸುರಿ ಕೃಷ್ಣಮೂರ್ತಿ ವಾಯ್ಸು, ವಜ್ರಮುನಿ ವಾಯ್ಸ್, ಸುಂದರಕೃಷ್ಣ ಅರಸ್ ವಾಯ್ಸ್ ಹಿಂಗೆ ಒಂದೊಂದ್ ಕ್ಯಾರೆಕ್ಟರ್‍ಗೆ ಒಂದೊಂದ್ ವಾಯ್ಸಲ್ಲಿ ರೀಡಿಂಗ್ ಕೊಡ್ತಿದ್ದೆ. ಅವರು ತುಂಬಾ ಎಂಜಾಯ್ ಮಾಡಿದ್ರು. “ಜೈನ್ ನಾವೇ ಪಿಚ್ಚರ್ ಮಾಡ್‍ಬಿಡಣ ಇದನ್ನ” ಅಂದ್ರು. “ಸಾರ್ ಆದರೆ ಪ್ರೊಡ್ಯೂಸರ್ರು” ಅಂದೆ ನಾನು. ಜಿಟಿ ಜಯಕುಮಾರ್ ಅಂತ ಮೊದಲ ಪ್ರೊಡ್ಯೂಸರ್ ಅದಕ್ಕೆ. ಅವ್ರನ್ನ ಕರೆಸಿ ಕೇಳಿದ್ರು. ಅವರು “ಸಾರ್ ನಾವ್ ಅದಕ್ಕೆ ದುಡ್ಡಾಕ್ಬುಟ್ಟಿದ್ದೀವಿ” ಅಂದ್ರು. “ಸರಿ ದುಡ್ಡು ಕೊಡ್ತೀವಿ ನಿಮ್ದು ತಗೊಂಡ್ಬಿಡಿ” ಅಂದ್ರು. ಅವರು “ಇಲ್ಲ ಸಾರ್ ನನಗೆ ಹೆಸರು ಬೇಕು” ಅಂದ್ರು. ವರದಣ್ಣ ಬಹಳ ವಿಶಾಲ ಹೃದಯಿ. “ಅಯ್ಯೋ ಹೋಗ್ಲಿ ಬಿಡ್ರಿ. ಅವರು ಹೆಸರು ಹಾಕಿದ್ರೆ ನಮ್ದು ನಿಮ್ದು ಏನ್ ಹೋಗ್ತದೆ? ಇದ್ಕೊಳ್ಲಿ ಬಿಡ್ರಿ ಅಂತ ಹೇಳಿ ಒಪ್ಕೊಂಡ್ರು. ಸಿನಿಮಾ ಮಾಡಿ ಮುಗ್ಸಿದ್ರಪ್ಪ. ಚೆನ್ನಾಗ್ ಹೋಯ್ತು ಪಿಚ್ಚರ್ರು”.


215 views